ಹಿಂದುಳಿದ ವರ್ಗಗಳು ಸಿಎಂಗೆ ಸ್ಥೈರ್ಯ ತುಂಬಬೇಕಿದೆ

IMG-20240829-WA0047
Published on

ತಿ.ನರಸೀಪುರ: ದೇಶದಲ್ಲಿ ಒಕ್ಕೂಟದ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ತುಳಿಯುವ ಹುನ್ನಾರ ಮಾಡುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಆರೋಪಿಸಿದರು.


ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ದಸಂಸದಿಂದ ಸೆ.3ರಂದು ಹಮ್ಮಿಕೊಂಡಿರುವ ಪ್ರತಿಭಟನೆ ಸಂಬಂಧ ಗುರುವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಾಂವಿಧಾನಿಕ ಹುದ್ದೆಯಲ್ಲಿದ್ದು ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ರಾಜ್ಯಪಾಲರ ನಡೆ ಸರಿಯಲ್ಲ. ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹಸ್ತಕ್ಷೇಪವಿಲ್ಲ. ರಾಜಕೀಯ ದುರುದ್ದೇಶದಿಂದ ಅವರ ಪತ್ನಿ ಹೆಸರನ್ನು ಎಳೆದು ತರಲಾಗುತ್ತಿದೆ. ಡಿ.ದೇವರಾಜ ಅರಸು, ಬಂಗಾರಪ್ಪ, ಧರ್ಮಸಿಂಗ್ ಅವರಂತೆ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಯತ್ನಿಸಲಾಗುತ್ತಿದೆ. ಅದ್ದರಿಂದ ಶೋಷಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳು ಸಂಘಟಿತರಾಗಿ ಸಿಎಂಗೆ ನೈತಿಕ ಸ್ಥೈರ್ಯ ತುಂಬಲು ಹೋರಾಟ ನಡೆಸಬೇಕು ಎಂದರು.


ಕೈಯಂಬಳ್ಳಿ ಕೃಷ್ಣ ಮಾತನಾಡಿ, ರಾಜ್ಯ ಸರ್ಕಾರವನ್ನು ಕೆಡವಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ವಿಪಕ್ಷಗಳು ಕುತಂತ್ರ ರಾಜಕಾರಣ ಮಾಡುತ್ತಿವೆ. ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ವಿರುದ್ಧ ಹಮ್ಮಿಕೊಂಡಿರುವ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ತಿಳಿಸಿದರು.
ದಸಂಸ ತಾಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್, ಮುಖಂಡರಾದ ಬನ್ನಹಳ್ಳಿಹುಂಡಿ ಉಮೇಶ್, ಆಲಗೂಡು ನಾಗರಾಜು, ಶಾಂತಾ, ಸುಜ್ಜಲೂರು ಶಿವಯ್ಯ, ಯಡದೊರೆ ನಾರಾಯಣ, ಸಿಹಳ್ಳಿ ರಂಗಸ್ವಾಮಿ, ಮಾದಿಗಹಳ್ಳಿ ರಾಮು, ಆದಿ ಬೆಟ್ಟಹಳ್ಳಿ ಅರ್ಜುನ, ಪಾಪಣ್ಣಿ, ಅರವಟ್ಟಿಗೆಕೊಪ್ಪಲು ಕೃಷ್ಣ, ಕೇತುಪುರ ಶಿವನಂಜು, ರಮೇಶ್, ಹ್ಯಾಕನೂರು ಮಹೇಶ, ಸುರೇಶ, ಕೊಳಗಹಳ್ಳಿ ಗುರು, ಬೇವಿನಹಳ್ಳಿ ದಿನೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net