

ಕನಕಪುರ : ಸ್ವಾತಂತ್ರ್ಯ ನಂತರದ 7 ದಶಕಗಳ ಅವಧಿಯಲ್ಲಿ ಬಾಚಳ್ಳಿದೊಡ್ಡಿ ಗ್ರಾಮಕ್ಕೆ ಮೊದಲಬಾರಿ ಸಾರಿಗೆ ಸಂಪರ್ಕ ಕಲ್ಪಿಸಿದ್ದು, ಸೋಮವಾರ ಬಸ್ ಸಂಚಾರ ಕಂಡು ಜನರು ಸಂಭ್ರಮಿಸಿದರು.
ನಗರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶನಿವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಬಾಚಳ್ಳಿದೊಡ್ಡಿ ಸೇರಿ ಐದಾರು ಗ್ರಾಮಸ್ಥರು ಸಾರಿಗೆ ಸಂಪರ್ಕಕ್ಕೆ ಬೇಡಿಕೆ ಇಟ್ಟಿದ್ದರು, ಇದಕ್ಕೆ ಸ್ಪಂದಿಸಿದ ಡಿಸಿಎಂ, ಅಧಿಕಾರಿಗಳ ಜತೆ ಚರ್ಚಿಸಿ ಸೋಮವಾರದಿಂದಲೇ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದರು. ಅದರಂತೆ ಸೋಮವಾರ ಮುಂಜಾನೆ ಗ್ರಾಮಕ್ಕೆ ಸಾರಿಗೆ ಸಂಪರ್ಕ ಕಲ್ಪಿಸಲಾಗಿದೆ.
ರಾಮನಗರ ರಸ್ತೆ, ಚಿಕ್ಕಮುದವಾಡಿಯಿಂದ 4 ಕಿಮೀ ದೂರದಲ್ಲಿರುವ ಬಾಚಳ್ಳಿದೊಡ್ಡಿ ಹಾಗೂ ಸಮೀಪದ ಮೇದರದೊಡ್ಡಿ, ವಾಡೇದೊಡ್ಡಿ, ಕೆಬ್ಬೆದೊಡ್ಡಿ, ಸಂಕ್ರಾತಿತಾಂಡ್ಯ ಸೇರಿ ಹಲವು ಗ್ರಾಮಗಳಿಗೆ ಈ ಬಸ್ ವ್ಯವಸ್ಥೆಯಿಂದ ಅನುಕೂಲವಾಗಿದೆ. ಗ್ರಾಮಕ್ಕೆ ಸರ್ಕಾರಿ ಬಸ್ ಸೇವೆ ಕಂಡು ಹರ್ಷಗೊಂಡ ಗ್ರಾಮಸ್ಥರು ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಈ ವೇಳೆ ಗ್ರಾಪಂ ಸದಸ್ಯ ಕೃಷ್ಣನಾಯ್ಕ ಮಾತನಾಡಿ, 70 ವರ್ಷಗಳಿಂದಲೂ ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ರಾಮನಗರ ಮುಖ್ಯ ರಸ್ತೆಯಿಂದ ಐದು ಕಿಮೀ ದೂರದಲ್ಲಿರುವ ಬಾಚಳ್ಳಿದೊಡ್ಡಿ ಸೇರಿ ಸುತ್ತಮುತ್ತಲ ಲಂಬಾಣಿ ಹಾಗೂ ಇತರ ಹಿಂದುಳಿದ ಜನಾಂಗದವರು ವಾಸಿಸುವ ಈ ಭಾಗಕ್ಕೆ ಸಾರಿಗೆ ಸಂಪರ್ಕ, ರಸ್ತೆ ಹಾಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ ಮರೀಚಿಕೆಯಾಗಿ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದೆವು. ನಮ್ಮ ಮನವಿಗೆ ಸ್ಪಂದಿಸಿದ ಡಿ.ಕೆ.ಶಿವಕುಮಾರ್ ಮನೆಯ ಬಾಗಿಲಿಗೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು.
ಮೂಲ ಸೌಕರ್ಯಗಳಿಲ್ಲದೆ ಈಗಾಗಲೇ ಮುಕ್ಕಾಲು ಆಯುಷ್ಯ ಕಳೆದಿರುವ ನಮಗೆ ಗ್ರಾಮಕ್ಕೆ ಬೈಪಾಸ್ ರಸ್ತೆ, ಶುದ್ಧ ಕುಡಿಯುವ ನೀರು ಕಲ್ಪಿಸಿದ್ದಾರೆ. ಇದರಿಂದ ಜನರ ಆರೋಗ್ಯ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಆಸ್ಪತ್ರೆ ರೋಗಿಗಳು ಹಾಗೂ ಉದ್ಯೋಗಸ್ಥರಿಗೆ ಕೆಲಸಕ್ಕೆ ತೆರಳಲು ಅನುಕೂಲವಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಲಿಂಗಣ್ಣ, ಮಾಜಿ ಅಧ್ಯಕ್ಷ ಕುಂತಿಕಲ್‌ದೊಡ್ಡಿ ಬಸವರಾಜು, ಜಿ.ಪಂ ಮಾಜಿ ಸದಸ್ಯ ವೆಂಕಟೇಶ್, ನಗರಸಭೆ ಮಾಜಿ ಅಧ್ಯಕ್ಷ ಕೆ.ಎನ್.ದಿಲೀಪ್, ಮುಖಂಡರಾದ ಶಂಭುಲಿಂಗಪ್ಪ, ಕೃಷ್ಣನಾಯ್ಕ, ರಮೇಶ್‌ನಾಯ್ಕ, ರಾಜುಗಾಂಧಿ ನಾಯ್ಕ, ರಾಮಸ್ವಾಮಿ, ರಾಮಣ್ಣ, ಕಾಡೇಗೌಡ ಸೇರಿ ಅನೇಕರು ಇದ್ದರು.