

ಸಾಲಿಗ್ರಾಮ: ಪಟ್ಟಣದ ಹೊರವಲಯದಲ್ಲಿ ಇರುವ ಸಾಲಿಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ (ಐಟಿಐ ಕಾಲೇಜು) ಪ್ರವೇಶ ಮಾಡುತ್ತಿದ್ದ ಹೆಬ್ಬಾವಿನ ಮರಿ ಕಂಡು ಬೋಧಕರು ಮತ್ತು ವಿದ್ಯಾರ್ಥಿಗಳು ಬೆಚ್ಚಿ ಬಿದ್ದರು.
ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪ್ರಾಧ್ಯಾಪಕ ರಘು ಫೋನ್ ಕರೆ ಮಾಡಿ ಮಾಹಿತಿ ನೀಡಿದರು. ಮುಖ್ಯದ್ವಾರದಲ್ಲಿದ್ದ ಹೆಬ್ಬಾವಿನ ಮರಿಯನ್ನು ಅರಣ್ಯ ಸಿಬ್ಬಂದಿ ಪತ್ತೆ ಹಚ್ಚಿದರು. ಬಳಿಕ ಅದನ್ನು ಹಿಡಿದು ನಂತರ ಕಾಲೇಜಿನ ಸುತ್ತಮುತ್ತಲಿನ ಮರ ಮತ್ತು ಹಳ್ಳ ಹಾಗೂ ಬೇಲಿಗಳನ್ನು ಪರಿಶೀಲಿಸಿದರೂ ಹೆಬ್ಬಾವಿನ ಸುಳಿವು ಸಿಗಲಿಲ್ಲ.
ಗಾಬರಿಗೊಂಡಿದ್ದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದರಿಂದ ನಿಟ್ಟುಸಿರುಬಿಟ್ಟರು. ಪಟ್ಟಣದ ಹೊರ ವಲಯದಲ್ಲಿ ಕಾಲೇಜು ಇರುವುದರಿಂದ ಹಾವು ಕಾಣಿಸಿಕೊಂಡಿದೆ. ಯಾವುದೇ ಆತಂಕ ಪಡಬೇಡಿ ಎಂದು ಅರಣ್ಯ ಇಲಾಖೆ ನೌಕರ ರಾಜೇಶ್ ವಿದ್ಯಾರ್ಥಿಗಳಿಗೆ, ಬೋಧಕರಿಗೆ ಧೈರ್ಯ ತುಂಬಿದರು.
ಪದೇ ಪದೆ ಹೆಬ್ಬಾವಿನ ಮರಿಗಳು ಕಾಲೇಜು ಆವರಣದಲ್ಲಿ ಕಾಣಿಸುತ್ತಿರುವುದನ್ನು ನೋಡಿದರೆ ಇಲ್ಲಿ ಹೆಬ್ಬಾವು ಇರುವುದು ಖಾತ್ರಿಯಾಗಿದೆ ಎಂದು ಕಾಲೇಜಿನ ವಿದ್ಯಾರ್ಥಿಯೊಬ್ಬರು ಆತಂಕ ವ್ಯಕ್ತಪಡಿಸಿದನು.
ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಜೋಪಾನವಾಗಿ ಓಡಾಡಬೇಕು. ಅಲ್ಲದೆ ವಿಷ ಜಂತುಗಳು ಕಂಡ ತಕ್ಷಣ ಮಾಹಿತಿ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ತರಬೇತುದಾರ ಬಿ.ರಘು ಅವರಿಗೆ ತಿಳಿಸಿದರು.
ಮೇಲಧಿಕಾರಿಗಳ ಸೂಚನೆಯಂತೆ ಹಾವಿನ ಮರಿಯನ್ನು ತೆಗೆದುಕೊಂಡು ಹೋಗುತ್ತಿದ್ದು, ಅವರ ಸೂಚನೆಯಂತೆ ಕಾಡಿಗೆ ಬಿಡಲಾಗುವುದು ಎಂದು ರಾಕೇಶ್ ತಿಳಿಸಿದರು.