ಮಗುವಿನ ಮೊದಲ ಲಸಿಕೆಯೇ ತಾಯಿ ಹಾಲು - ಬಿಎಚ್‌ಇಒ ಗಂಗಮ್ಮ ಹೇಳಿಕೆ

World Breastfeeding Week in Belgatti Village
ಬೆಳಗಟ್ಟಿ ಗ್ರಾಮದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಬಿಎಚ್‌ಇಒ ಗಂಗಮ್ಮ ಉದ್ಘಾಟಿಸಿದರು. ಬೆಳಗಟ್ಟಿ ಗ್ರಾಮದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ವಿಶ್ವ ಸ್ತನ್ಯಪಾನದ ಬಿತ್ತಿ ಪತ್ರಗಳನ್ನು ಪ್ರದರ್ಶಿಸಲಾಯಿತು.
Published on

ಅಳವಂಡಿ: ಮಗು ಜನಿಸಿದ ತಾಸಿನೊಳಗೆ ತಾಯಿ ಹಾಲು ನೀಡುವುದರಿಂದ ಶಿಶುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ತಿಳಿಸಿದರು.

ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಜಿಪಂ ಕೊಪ್ಪಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಕವಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಪ್ರಸಕ್ತ ವರ್ಷ ದುಡಿಮೆಯಲ್ಲಿರುವ ಪಾಲಕರಿಗೆ ಸ್ತನ್ಯಪಾನದಲ್ಲಿ ಸಕ್ರಿಯಗೊಳಿಸಲು ಕೆಲ ಬದಲಾವಣೆ ತರಲಾಗುವುದು. ದುಡಿಯುವ ಪಾಲಕರು ಮಕ್ಕಳಿಗೆ ಹಾಲು ನೀಡುವುದನ್ನು ತಪ್ಪಿಸಬಾರದು. ಮಗುವಿಗೆ ಹಾಲು ನೀಡುವುದು ತಾಯಿಯ ಜವಾಬ್ದಾರಿ ಎಂದರು.

ತಾಯಿ ಹಾಲನ್ನು ಕೃತಕವಾಗಿ ಸೃಷ್ಟಿಸಲಾಗದು ಹಾಗೂ ಸ್ತನ್ಯಪಾನ ಮಾತೆಯ ಮಮತೆಯ ಪ್ರತೀಕ, ಮಗುವಿಗೆ ಹಾಲು ನೀಡುವುದರಿಂದ ಶಿಶು ಮರಣ ಪ್ರಮಾಣ ಕಡಿಮೆಯಾಗಲಿದೆ. ತಾಯಿ ಮಗುವಿನ ಬಾಂಧವ್ಯ ಹೆಚ್ಚಾಗಲಿದೆ. ಮಗುವಿಗೆ ದಿನದಲ್ಲಿ 10 ರಿಂದ 15 ಬಾರಿ ಹಾಲು ಕುಡಿಸುವಂತೆ ಸಲೆಹೆ ನೀಡಿದರು. ನಂತರ ವಿಶ್ವ ಸ್ತನ್ಯಪಾನದ ಬಿತ್ತಿ ಪತ್ರಗಳನ್ನು ಪ್ರದರ್ಶಿಸಲಾಯಿತು.

ಆರೋಗ್ಯ ನೀರಿಕ್ಷಣಾಧಿಕಾರಿ ವಸಂತ ಗದ್ದಿಕೇರಿ, ಕಾಶಪ್ಪ, ಆರೋಗ್ಯ ಸುರಕ್ಷತಾಧಿಕಾರಿ ಸುಜಾತಾ ಇಟಗಿ, ಅಂಗನವಾಡಿ ಕಾರ್ಯಕರ್ತೆಯರಾದ ಸರೋಜಾ, ರುಕ್ಮಿಣಿ, ಆಶಾ ಜೈತುಂಬಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net