

ಆನೇಕಲ್/ ಹಾರೋಹಳ್ಳಿ; ಅನೇಕಲ್ ವನ್ಯಜೀವಿ ವಲಯದ ರಸ್ತೆ ಬದಿಯಲ್ಲಿ ಕಾಡಾನೆ ಮರಿ ಮೃತಪಟ್ಟಿದ್ದು, ಅಧಿಕಾರಿಗಳು ವೈದ್ಯಕೀಯ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಿ ಅಂಗಾಂಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕಾಡಿನಲ್ಲೆ ಅಂತ್ಯಕ್ರಿಯೆ ನಡೆಸಿದರು.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆನೇಕಲ್ ವನ್ಯಜೀವಿ ವಲಯದ ಉರುಗನ ದೊಡ್ಡಿ ಮತ್ತು ತಟ್ಟೆಕೆರೆ ರಸ್ತೆಯ ಸೀಗೆಹಳ್ಳಿ ಬಳಿ ಸುಮಾರು 8 ವರ್ಷದ ಗಂಡಾನೆ ಮಂಗಳವಾರ ಬೆಳಗ್ಗೆ ಮೃತಪಟ್ಟಿತ್ತು. ಹಾರೋಹಳ್ಳಿಯಿಂದ ಆನೇಕಲ್, ಜಿಗಣಿ ಕೈಗಾರಿಕೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ನಡುವೆ ಐದು ಕಿಮೀ ಅರಣ್ಯ ಆವರಿಸಿದ್ದು, ಇಲ್ಲಿನ ಸೀಗೆಕಟ್ಟೆ ಬಳಿ ರಸ್ತೆ ಬದಿಯ ಹಳ್ಳದಲ್ಲಿ ಆನೆ ಮರಿ ಘೀಳಿಡುತ್ತಿರುವ ಮಾಹಿತಿ ಆನೇಕಲ್ ವನ್ಯಜೀವಿ ವಲಯದ ಅಧಿಕಾರಿಗಳಿಗೆ ಮುಟ್ಟಿದ ಕೂಡಲೇ ಸಿಬ್ಬಂದಿ ಸ್ಥಳಕ್ಕೆ ಬಂದು ನೋಡಿದಾಗ ಮರಿ ಆನೆ ನಿತ್ರಾಣಗೊಂಡು ಕುಸಿದು ಬಿದ್ದು ಮೃತಪಟ್ಟಿರುವುದು ಗೊತ್ತಾಗಿದೆ. ಆನೆ ಮರಿ ಸಾವಿಗೆ ಹೃದಯಾಘಾತ ಕಾರಣವೆಂದು ಶಂಕಿಸಲಾಗಿದೆ.
ರಸ್ತೆ ಬದಿಯಲ್ಲೆ ವಾಹನ ಗುದ್ದಿ ಆನೆ ಮೃತಪಟ್ಟಿದೆ ಎಂದು ಹಲವರು ಊಹಿಸಿದ್ದರು. ಆದರೆ ದೇಹದ ಮೇಲೆ ಯಾವುದೇ ಗಾಯಗಳಿಲ್ಲದ ಕಾರಣದಿಂದ ಆನೆಯ ಸಾವಿಗೆ ಖಚಿತ ಮಾಹಿತಿ ಲಭ್ಯವಾಗಿರಲಿಲ್ಲ. ನಂತರ ಸ್ಥಳಕ್ಕೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ರವಿಕುಮಾರ್ ಭೇಟಿ ನೀಡಿ ಮಾಹಿತಿ ಪಡೆದು ಪಶುವೈದ್ಯರ ತಂಡವನ್ನು ಸಂಪರ್ಕಿಸಿ ಮರಣೋತ್ತರ ಪರೀಕ್ಷೆ ನಡೆಸಲು ಮನವಿ ಮಾಡಿದರು.
ವೈದ್ಯಾಧಿಕಾರಿ ಡಾ.ಕಿರಣ್ ನೇತೃತ್ವದ ತಂಡ ಮಹಜರು ಮಾಡಿ ರಸ್ತೆ ಪಕ್ಕದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಬೇರೆಡೆ ಸ್ಥಳಾಂತರಿಸಲು ಸೂಚಿಸಿದರು. ಸಿಬ್ಬಂದಿ ಕೂಡಲೆ ಜೆಸಿಬಿ ಬಳಸಿ ಟ್ರ್ಯಾಕ್ಟರ್‌ನಲ್ಲಿ ಅರಣ್ಯದ ಮಧ್ಯ ಭಾಗಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿ ಅಂಗಾಂಗಳನ್ನು ಪ್ರಯೋಗಾಲಯಕೆ ಕಳುಹಿಸಿ ಕೊಟ್ಟರು. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಣಾಧಿಕಾರಿ ಐಎ್ಎಸ್ ಸೂರ್ಯಸೇನ್ ಸ್ಥಳದಲ್ಲಿದ್ದು ಮರಣೋತ್ತರ ಪರೀಕ್ಷೆ ನಡೆಸಿದರು.
ಹೃದಯಾಘಾತ?
ಆನೆ ಸಾವಿಗೆ ಹಲವು ಅನುಮಾನ ವ್ಯಕ್ತವಾಗಿತ್ತಾದರೂ ಕೊನೆಗೆ ವೈದ್ಯಕೀಯ ಪ್ರಾಥಮಿಕ ಮಾಹಿತಿಯಿಂದ ಹೃದಯಾಘಾತ ಕಾರಣ ಎಂದು ತಿಳಿದು ಬಂದಿರುವುದಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ತಿಳಿಸಿದರು. ಹೊಟ್ಟೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಗುಂಪಾನೆಗಳಿಂದ ಬೇರ್ಪಟ್ಟು ಒಂಟಿಯಾಗಿ ಸಂಚರಿಸಿ ನಿತ್ರಾಣಗೊಂಡಿದ್ದರಿಂದ ನೆಲಕ್ಕೆ ಉರುಳಿ ಬಿದ್ದಾಗ ಹೃದಯಾಘಾತವಾಗಿರಬಹುದು ಎಂದರು.
ಬನ್ನೇರುಘಟ್ಟ , ಹಾರೋಹಳ್ಳಿ, ಆನೇಕಲ್ ವನ್ಯಜೀವಿ ವಲಯದ ಮತ್ತು ಆನೇಕಲ್ ಪ್ರಾದೇಶಿಕ ವಲಯದ ಅರಣ್ಯ ಸಿಬ್ಬಂದಿ ಇದ್ದರು.