

ಬೆಂಗಳೂರು: ದೇವರು ಧರ್ಮಕ್ಕಿಂತ ಮನುಷ್ಯನಿಗೆ ಅಗತ್ಯ ಇರುವುದು ಅನ್ನ. ಜೊತೆಗೆ ಅರಿವೇ, ಔಷಧ, ಆಶ್ರಯದ ಅಗತ್ಯವಿದೆ ಎಂದು ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮಿ ಹೇಳಿದರು.
ಡಾ. ಬಿ.ಟಿ. ಲಲಿತಾ ನಾಯಕ್ ೌಂಡೇಷನ್ ನಗರದ ನಯನ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಬಿ.ಟಿ.ಲಲಿತಾ ನಾಯಕ್ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಮೊದಲು ಹಸಿವು ನೀಗಿಸಲು ಅನ್ನ, ವಾಸಿಸಲು ಸೂರು ಹಾಗೂ ಬಟ್ಟೆ ಮುಖ್ಯವಾಗುತ್ತದೆ. ಬಸವಣ್ಣನವರೂ ಸಹ ಇದನ್ನೇ ಹೇಳಿದ್ದಾರೆ ಎಂದರು.
ಹಿಂಸಾ ಪ್ರವೃತ್ತಿಯ ಜೀವನದಲ್ಲಿ, ಈ ದೇಶದಲ್ಲಿರು ಮತೀಯವಾದಿಗಳು, ಸಂಪ್ರದಾಯವಾದಿಗಳು ಕೆಲ ವರ್ಗದವರ ಮೇಲೆ ಹೇಗೆ ಆಳ್ವಿಕೆ ನಡೆಸಿದರು ಎನ್ನುವದನ್ನು ಅರ್ಥ ಮಾಡಿಕೊಳ್ಳಬೇಕು. ಅಂತಹ ಆಳುವ ವ್ಯವಸ್ಥೆಗೆ ದೊಡ್ಡ ಪೆಟ್ಟನ್ನು ಕೊಟ್ಟವರು ಬಸವಣ್ಣ. ಆದ್ದರಿಂದಲೆ ಬಸವಣ್ಣನವರನ್ನು ಕಂಡರೆ ಮತೀಯವಾದಿಗಳಿಗೆ ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
ವೈಚಾರಿಕತೆ ಎಂದರೆ ಸಂಪ್ರದಾಯವನ್ನು ವಿರೋಧಿಸುವುದು ಎಂದು ಹಲವರು ತಿಳಿದುಕೊಂಡಿದ್ದಾರೆ. ಅದಲ್ಲ. ಮನುಷ್ಯತ್ವವನ್ನು ಉಳಿಸುವುದು ವೈಚಾರಿಕತೆ. ಅತಿಯಾದ ವೈಚಾರಿಕತೆ ಮನುಷ್ಯರನ್ನು ಸ್ವೇಚ್ಛಾಚಾರಕ್ಕೆ ತೆಗೆದುಕೊಂಡು ಹೋಗುತ್ತದೆ. ಅದೇ ರೀತಿ ಅತಿಯಾದ ಮೂಢನಂಬಿಕೆ ಅಧಃ ಪತನಕ್ಕೆ ದೂಡುತ್ತದೆ ಎಂದ ಅವರು ಟ್ರಸ್ಟ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ್, ವೈಜ್ಞಾನಿಕ ಚಿಂತಕ ಡಾ.ಹುಲಿಕಲ್ ನಟರಾಜ್, ನಾಡೋಜ ಡಾ.ಮನುಬಳಿಗಾರ್, ಟ್ರಸ್ಟ್ ಸಂಸ್ಥಾಪಕಿ ಎಸ್.ಎಲ್.ಉಮಾದೇವಿ, ಖಜಾಂಚಿ ಓಂ ಪ್ರಕಾಶ್, ಕಾರ್ಯದರ್ಶಿ ಕೆ.ಎಚ್.ಅಂಜನಮೂರ್ತಿ ಇತರರು ಇದ್ದರು.