

ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ನೂತನ ಅಧ್ಯಕ್ಷರಾಗಿ ಬಿ.ಎನ್.ಪ್ರಕಾಶ್ ಆಯ್ಕೆಗೊಂಡಿದ್ದು, ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವು ನಗರದ ಸ್ಪೈಸ್ ರಾಕ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಬಿ.ಎನ್.ಪ್ರಕಾಶ್, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ 12 ವರ್ಷಗಳ ಹಿಂದೆ ಪ್ರಾರಂಭವಾಗಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸದಸ್ಯರು ಸೇರ್ಪಡೆಗೊಳ್ಳುತ್ತಿದ್ದಾರೆ. ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತ ಸಾಮಾಜಿಕ ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಸಮಾಜದಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಂಸ್ಥೆ ಮಾದರಿಯಾಗಲು ನಾವೆಲ್ಲರೂ ಕೈಜೋಡಿಸಬೇಕು. ದೇಶ ಹಾಗೂ ವಿದೇಶದಲ್ಲಿಯೂ ಎಸ್‌ಸಿಐ ಅಧಿಕ ಸಂಖ್ಯೆಯಲ್ಲಿ ಸದಸ್ಯರನ್ನು ಹೊಂದುವ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ ಎಂದರು.
ರಾಷ್ಟ್ರೀಯ ಅಧ್ಯಕ್ಷ ಪಿಪಿಎಫ್ ಎಂ.ಆರ್.ಜಯಿಶಾ ಮಾತನಾಡಿ, ಕೊಡಗಿನ ಗೋಣಿಕೊಪ್ಪಲುವಿನಲ್ಲಿ 12ವರ್ಷಗಳ ಹಿಂದೆ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿದೆ. ಮಾತೃ ಘಟಕ ಪ್ರಾರಂಭವಾದ ನಂತರ ಕರ್ನಾಟಕದಲ್ಲಿ 65 ಘಟಕಗಳು ಸೇವೆ ಸಲ್ಲಿಸುತ್ತಿವೆ. ಪ್ರತಿ ವರ್ಷವೂ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿವೆ. ಇಂದು ರಾಷ್ಟ್ರಮಟ್ಟದಲ್ಲಿ ಸಂಸ್ಥೆಯು ಬೆಳೆದು ನಿಂತಿದೆ. ಇವುಗಳಿಗೆ ಎಸ್‌ಸಿಐ ಗೋಣಿಕೊಪ್ಪ ಪ್ರಮುಖ ಕಾರಣ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ರಾಷ್ಟ್ರೀಯ ತರಬೇತುದಾರ ಡಾ.ಶಿವಕುಮಾರ್ ಸಲಹೆಗಳನ್ನು ನೀಡಿದರು. ನಿಕಟಪೂರ್ವ ಅಧ್ಯಕ್ಷ ಮುರುವಂಡ ಉತ್ತಪ್ಪ ಕಳೆದ 1 ವರ್ಷದ ಅವಧಿಯಲ್ಲಿ ನಡೆಸಿದ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು.
ಗೋಣಿಕೊಪ್ಪಲುವಿನ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್ ವರ್ಣೆಕರ್ ಖಜಾಂಚಿಯಾಗಿ ಮೇಕೇರಿರ ಮೋಹನ್ ನೂತನ ಆಡಳಿತ ಮಂಡಳಿಗೆ ನೇಮಕಗೊಂಡರು. ಡಾ.ಆಶಿಕ್ ಚಂಗಪ್ಪ ಹಾಗೂ ಸೌಮ್ಯಾನಾಗೇಶ್ ನಡೆಸಿಕೊಟ್ಟ ಹಾಡುಗಾರಿಕೆ ಗಮನ ಸೆಳೆಯಿತು.
ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ಪದಾಧಿಕಾರಿಗಳಾದ ಸಣ್ಣುವಂಡ ರಜನ್ ತಿಮ್ಮಯ್ಯ, ಟಿ.ಜೆ.ಆಂಟೋನಿ, ಡಿ.ಬಿ.ರವಿ, ಮನ್ನಕ್ಕಮನೆ ಬಾಲಕೃಷ್ಣ, ಸೌಮ್ಯಾ ಬಾಲಕೃಷ್ಣ, ವಕೀಲ ಕಾಶಿಯಪ್ಪ, ಸಂಜೀವ್, ದಿಲ್ ಕುಮಾರ್, ಕೆ.ಜಿ.ಪ್ರವೀಣ್, ಸಚ್ಚಿನ್ ಬೆಳ್ಳಿಯಪ್ಪ, ಶರತ್‌ಮ್ಯಾಥ್ಯೂ, ಡಾ.ಯತಿರಾಜ್, ಶರತ್ ಗಣ್ಯರು ಭಾಗವಹಿಸಿದ್ದರು.