

ತುಮಕೂರು: ಮಹಾರಾಷ್ಟ್ರ ರಾಜಕೀಯದ ಇತ್ತೀಚೆಗಿನ ಬೆಳವಣಿಗೆಗಳು, ಕರ್ನಾಟಕದಲ್ಲಿ ಹಿಂದಿನ ವಿಧಾನಸಭೆ ಅವಧಿಯಲ್ಲಿ ನಡೆದ ರಾಜಕೀಯ ಪಕ್ಷಾಂತರ ನೋಡಿದರೆ ಪಕ್ಷಾಂತರ ನಿಷೇಧ ಕಾಯ್ದೆ ನಗೆಪಾಟಲಿಗೀಡಾಗಿದೆ ಎನ್ನಿಸುತ್ತದೆ ಎಂದು ರಾಜ್ಯ ಚಿತ್ರಕಲಾ ಪರಿಷತ್ ಅಧ್ಯಕ್ಷ , ವಿಧಾನಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ವೀಚಿ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ 2022ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಪಕ್ಷದಲ್ಲಿ ಗೆದ್ದು ಅಧಿಕಾರಕ್ಕೋಸ್ಕರ ರಾಜೀನಾಮೆ ನೀಡಿ ಮತ್ತೊಂದು ಪಕ್ಷದಿಂದ ಮತ್ತೆ ಆರಿಸಿಬರುವ ಹೊಸ ಸ್ವರೂಪದ ಅನೈತಿಕ ಪಕ್ಷಾಂತರ ಚಾಲ್ತಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ ವಿಪಕ್ಷ ನಾಯಕರಾಗಿದ್ದವರು ಏಕಾಏಕಿ ತನ್ನ ಗುಂಪಿನೊಂದಿಗೆ ಆಡಳಿತ ಪಕ್ಷದ ಜತೆ ಸೇರಿ ಡಿಸಿಎಂ ಆಗುತ್ತಾರೆ. ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿರುವ ನಿಯಮಗಳನ್ನು ಸರಿಯಾಗಿ ಪ್ರಯೋಗಿಸದಿರುವುದೇ ಇಂತಹ ಅನರ್ಥಗಳಿಗೆ ಎಡೆಮಾಡುತ್ತಿದೆ ಎಂದರು.
ಚುನಾವಣೆಯಲ್ಲಿ ಹಂಚುತ್ತಿರುವ ಕಪ್ಪು ಹಣ ನೋಡಿದರೆ ದೇಶದಲ್ಲಿ ಪರ‌್ಯಾಯ ಆರ್ಥಿಕ ವ್ಯವಸ್ಥೆಯಿರುವುದು ಗೋಚರಿಸುತ್ತಿದೆ. ಜಾತಿ ಮತ್ತು ಹಣದ ಪ್ರಭಾವದಲ್ಲಿ ಚುನಾವಣೆಗಳು ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ವೀಚಿ ಕಾವ್ಯನಾಮದಿಂದ ಖ್ಯಾತರಾಗಿದ್ದ ತುಮಕೂರಿನ ಚಿಕ್ಕವೀರಯ್ಯ ಅಪ್ಪಟ ಕೃಷಿಕರಾಗಿ, ಸಂವೇದನಾಶೀಲ ಬರಹಗಾರರಾಗಿ, ಕವಿಪ್ರಜ್ಞೆಯ ರಾಜಕಾರಣಿಯಾಗಿದ್ದವರು ಎಂದರು.
ಕೆ.ಆರ್.ನಾಯಕ್, ವೀಚಿ, ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ತ್ರಿಮೂರ್ತಿ ಜೋಡಿ ಇಡೀ ರಾಜಕಾರಣ, ಸಾಮಾಜಿಕ ಸಂಕಟಗಳನ್ನು ಕಟುವಾಗಿ ವಿಮರ್ಶಿಸುವ ನಿಷ್ಠುರವಾದಿಗಳೆನಿಸಿದ್ದರು. ಸಾಧಾರಣ ಬಿಳಿ ಜುಬ್ಬಾ, ಪೈಜಾಮ ಧರಿಸಿ ಸೈಕಲ್ ಏರಿ ಬರುತ್ತಿದ್ದ ವೀಚಿ ಅವರು ಬೇಂದ್ರೆ, ಅಡಿಗರಂತಹ ಹಿರಿಯ ಸಾಹಿತಿಗಳ ಒಡನಾಡಿಗಳೆನಿಸಿದ್ದರು ಎಂದು ಸ್ಮರಿಸಿದರು.
ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಎಸ್.ನಾಗಣ್ಣ, ಪ್ರಶಸ್ತಿ ಆಯ್ಕೆ ಸಮಿತಿಯ ಡಾ.ಚಿತ್ತಯ್ಯ ಪೂಜಾರ್, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಪ್ರತಿಷ್ಠಾನದ ಅಧ್ಯಕ್ಷ ಎಂ.ಬಸವಯ್ಯ, ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎಚ್.ನಾಗರಾಜು, ಡಾ.ಹನುಮೇಗೌಡ ಹಾಗೂ ಪ್ರಶಸ್ತಿ ಪುರಸ್ಕೃತರುಗಳು ವೇದಿಕೆಯಲ್ಲಿದ್ದರು.
ಪ್ರಶಸ್ತಿ ಪುರಸ್ಕೃತರು
ಸಾಹಿತಿ ಗಂಗಾಧರ ಬೀಚನಹಳ್ಳಿ ಅವರಿಗೆ "ವೀಚಿ ಸಾಹಿತ್ಯ ಪ್ರಶಸ್ತಿ", ಡಾ.ಶಿವಲಿಂಗಪ್ಪ ಕೆ.ಹಂದಿಹಾಳ್ ಅವರಿಗೆ "ವೀಚಿ ಯುವ ಸಾಹಿತ್ಯ ಪ್ರಶಸ್ತಿ", ಕೃಷಿಕ ಎಸ್.ಶಂಕರಪ್ಪ ಅಮ್ಮನಘಟ್ಟ ಅವರಿಗೆ "ಕನಕ ಕಾಯಕ ಪ್ರಶಸ್ತಿ", ಕೋಲಾಟ ಕಲಾವಿದ ದೊಡ್ಡಮಲ್ಲಯ್ಯ ಕೋಡಿಪಾಳ್ಯ ಅವರಿಗೆ "ವೀಚಿ ಜಾನಪದ ಪ್ರಶಸ್ತಿ" ನಗದು ಬಹುಮಾನ ನೀಡಿ ಗೌರವಿಸಲಾಯಿತು.