ಜೆಡಿಎಸ್​ನಿಂದ 6 ವರ್ಷ ಬಿ.ಎಚ್. ಚಂದ್ರಶೇಖರ್ ಉಚ್ಛಾಟನೆ

JDS 28
Published on

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಜೆಡಿಎಸ್​ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಚ್​.ಚಂದ್ರಶೇಖರ್​ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

'ನಿಮಗೆ ಜೆಡಿಎಸ್​ ಪಕ್ಷವು ರಾಜ್ಯಮಟ್ಟದಲ್ಲಿ ಹಲವು ಅವಕಾಶ ಕಲ್ಪಿಸಿದೆ. ಪಕ್ಷದಿಂದ ಸಾಕಷ್ಟು ಅನುಕೂಲ ಪಡೆದಿದ್ದರೂ ಈ ಸ್ಥಾನಗಳನ್ನು ದುರುಪಯೋಗ ಪಡಿಸಿಕೊಂಡು ನಿರಂತರವಾಗಿ ಪಕ್ಷ ಹಾಗೂ ಪಕ್ಷದ ವರಿಷ್ಠರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಾ ಪಕ್ಷ ವಿರೋಧಿ ಚಟುವಟಿಕೆ ನಡೆಸಿಕೊಂಡು ಬಂದಿದ್ದೀರಿ. ಹಾಗಾಗಿ ನಿಮ್ಮನ್ನು ಪಕ್ಷದಿಂದ 6 ವರ್ಷ ಕಾಲ ಉಚ್ಛಾಟನೆ ಮಾಡಲಾಗಿದೆ' ಜೆಡಿಎಸ್​ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಆರ್​. ಪ್ರಕಾಶ್​, ಆದೇಶ ಮೂಲಕ ಚಂದ್ರಶೇಖರ್​ಗೆ ತಿಳಿಸಿದ್ದಾರೆ.

ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡರ ಸೂಚನೆ ಹಿನ್ನೆಲೆ ಚಂದ್ರಶೇಖರ್​ರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಇದರ ಬೆನ್ನಲ್ಲೇ ಸೋಮವಾರ ಮಧ್ಯಾಹ್ನ ಬಿ.ಎಚ್​.ಚಂದ್ರಶೇಖರ್​ ಕಾಂಗ್ರೆಸ್​ ಸೇರ್ಪಡೆಗೊಂಡಿದ್ದಾರೆ.

ಆರ್​ಆರ್​ ನಗರ ಮತ್ತು ಶಿರಾ ಕ್ಷೇತ್ರಗಳ ಉಪಚುನಾವಣಾ ಸಮರ ಜೋರಾಗಿದ್ದು, ಪಕ್ಷಾಂತರ ಪರ್ವ ಕೂಡ ಬಿರುಸುಗೊಂಡಿದೆ. ಜೆಡಿಎಸ್​ನಿಂದ ಹೊರ ಹೋಗುವವರಿಗೆ ಶಾಲು-ಹಾರ ಹಾಕಿ ಇತ್ತೀಚಿಗಷ್ಟೇ ಮಾಜಿ ಸಿಎಂಎಚ್​.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದರು. ಇದೀಗ ಚಂದ್ರಶೇಖರ್​ ಕಾಂಗ್ರೆಸ್​ ಸೇರ್ಪಡೆ ಆಗಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net