

ಭಟ್ಕಳ: ತಾಲೂಕಿನಾದ್ಯಂದ ಬುಧವಾರ ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆ-ಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಜನರು ತೊಂದರೆ ಅನುಭವಿಸಿದ್ದಾರೆ.
ಹವಾಮಾನ ಇಲಾಖೆಯಿಂದ ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿತ್ತು. ಅದರಂತೆ ಮಂಗಳವಾರ ಸಂಜೆಯಿಂದ ಆರಂಭವಾದ ಮಳೆಗೆ ಜನಜೀವನ ಆಸ್ತವ್ಯಸ್ತಗೊಂಡಿದೆ. ತಾಲೂಕಿನ ಹೆಬಳೆ ಜಟಗೇಶ್ವರ ದೇವಸ್ಥಾನ, ಮುರ್ಡೆಶ್ವರದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಜಾಲಾವೃತಗೊಂಡಿದೆ. ಭಟ್ಕಳದ ಸರ್ಕಲ್ ಹಾಗೂ ಹೆದ್ದಾರಿಯಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆ ಉಂಟಾಯಿತು. ರಂಗಿನಕಟ್ಟೆ ರಾಷ್ಟಿ›ೕಯ ಹೆದ್ದಾರಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಕೂಡ ಕೃತಕ ಕೆರೆ ಸೃಷ್ಟಿಯಾಗಿದೆ.
ಮಾವಳ್ಳಿ- 1 ಗ್ರಾಮದ ಜನತಾ ಕಾಲನಿಯ ಅಂಗನವಾಡಿ ಕಟ್ಟಡದ ಮೇಲೆ ಬೆಳಗ್ಗೆ ಅಕೇಶಿಯಾ ಮರ ಬಿದ್ದು ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಹೆಂಚು ಮುರಿದು ಬಿದ್ದಿದೆ. ಗೋಡೆಯಲ್ಲಿ ಸ್ವಲ್ಪ ಪ್ರಮಾಣದ ಬಿರುಕು ಕಾಣಿಸಿಕೊಂಡಿದೆ. ಈ ವೇಳೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ್ಳಿಲ್ಲದ್ದರಿಂದ ಅನಾಹುತ ತಪ್ಪಿದೆ.
ಶಿರಾಲಿ -1 ಗ್ರಾಮದ ಗಣಪತಿ ನಾರಾಯಣ ದೇವಾಡಿಗ ಅವರ ವಾಸ್ತವ್ಯದ ಮನೆ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಹೆಬಳೆ ಗ್ರಾಮದ ತೆಂಗಿನಗುಂಡಿ, ಹಿರೇಕೆರಿಯಲ್ಲಿ ಮಳೆ ನೀರಿನ ಜತೆಗೆ ಸಮುದ್ರದ ನೀರು ಉಕ್ಕಿ ಕೃಷಿ ಜಮೀನಿಗೂ ನುಗ್ಗಿದೆ.
ಕೊಪ್ಪ ಗ್ರಾಮದ ಹಿಂಡ ಸಮೀಪದ ವೆಂಕಟೇಶ ದುರ್ಗ ನಾಯ್ಕ ಅವರ ಮನೆ ಮೇಲೆ ಮರ ಬಿದ್ದು ತೀವ್ರ ಹಾನಿಯಾಗಿದೆ. ಬೆಂಗ್ರೆ ಚಿಟ್ಟಿ ಹಕ್ಕಲನ ಗೊಯ್ದು ಈರಯ್ಯ ದೇವಾಡಿಗ ಅವರ ಮನೆಯ ಮೇಲೆ ಅಡಿಕೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ದುರ್ಗಮ್ಮ ನಾರಾಯಣ ದೇವಡಿಗ, ಪಾರ್ವತಿ ಸುಕ್ರಯ್ಯ ದೇವಡಿಗ, ಗಣಪತಿ ಸುಕ್ರಯ್ಯ ದೇವಡಿಗ ಬೊಗ್ರಿಜಡ್ಡು ಅವರ ವಾಸದ ಮನೆಗಳಿಗೆ ಹಾನಿಯಾಗಿದೆ.