

ಅಂತೋಣಿ ಪಿ.ವಿ.ಸಿದ್ದಾಪುರ
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿ ಗ್ರಾಮದ ಪಕ್ಕದ ಹೆಬ್ಬಾಲೆ ದೇವರಪುರ ಗ್ರಾಮದಲ್ಲಿರುವ ಶ್ರೀ ಅಯ್ಯಪ್ಪ-ಭದ್ರಕಾಳಿ ದೇವಸ್ಥಾನ ಭಕ್ತರ ಬೇಡಿಕೆಯನ್ನು ಈಡೇರಿಸುವ ಶ್ರದ್ಧಾ ಕೇಂದ್ರವಾಗಿದೆ.
ಶ್ರೀ ಅಯ್ಯಪ್ಪ-ಭದ್ರಕಾಳಿ ದೇವಸ್ಥಾನ 300ಕ್ಕೂ ಅಧಿಕ ವರ್ಷಗಳ ಪುರಾತನ ಇತಿಹಾಸ ಹೊಂದಿದೆ.
ಅಯ್ಯಪ್ಪ ಎಂಬ ವ್ಯಕ್ತಿ ಜೇನುಕುರುಬರನ್ನು ಕರೆದುಕೊಂಡು ದಟ್ಟ ಅರಣ್ಯಕ್ಕೆ ಬೇಟೆಗೆ ಹೋಗುತ್ತಾನೆ. ಅಲ್ಲಿ ಕಾಣಿಸಿಕೊಂಡ ಭದ್ರಕಾಳಿಯ ವ್ಯಾಮೋಹಕ್ಕೆ ಒಳಗಾಗಿ ತನ್ನ ಜತೆಯಲ್ಲಿದ್ದ ಜೇನುಕರುಬರನ್ನು ಕಾಡಿನಲ್ಲೇ ಬಿಟ್ಟು ಆಕೆಯೊಂದಿಗೆ ಓಡಿ ಹೋಗುತ್ತಾನೆ. ದಿಕ್ಕುಗೆಟ್ಟಂತಾದ ಜೇನುಕುರುಬರು ದಾರಿ ಹುಡುಕಾಡುವಾಗ ಅವರಿಬ್ಬರು ಏಕಾಂತದಲ್ಲಿ ಮುಳುಗಿರುವುದು ಕಂಡು ಬಂತಂತೆ. ತಮ್ಮನ್ನು ಮಧ್ಯಕಾಡಿನಲ್ಲಿ ಕೈಬಿಡಲು ಕಾರಣಳಾದ ಭದ್ರಕಾಳಿಯನ್ನು ಬೈಯ್ಯುತ್ತಾರೆ. ಹೀಗೆ ಬೈಯ್ಯುವುದೇ ಬೇಡುಹಬ್ಬವಾಗಿ ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ ಎಂದು ಹೇಳಲಾಗುತ್ತದೆ.
ಇಲ್ಲಿ ಪ್ರತಿ ವರ್ಷ ಮೇ ತಿಂಗಳ ಮೂರನೇ ಬುಧವಾರ ಮತ್ತು ಗುರುವಾರ ವಿಶಿಷ್ಟ ರೀತಿಯ ಬೇಡು ಹಬ್ಬವನ್ನು ಆಚರಿಸಲಾಗುತ್ತದೆ. ನಂಗ ಹಬ್ಬ ಕುದುರೆ ಹಬ್ಬ... ನಂಗ ದೇವ ಅಯ್ಯಪ್ಪ ದೇವ... ನಂಗೆಲ್ಲಾ ಸೇರಾಕ್... ನಂಗ ಸಂಸ್ಕೃತಿ ಉಳ್ಯ್ ಕ್....ಎಂದು ಹೇಳುವ ಕೊಡಗಿನ ಪ್ರಮುಖ ಬುಡಕಟ್ಟು ಜನಾಂಗಗಳಾದ ಜೇನುಕುರುಬರು, ಯರವರು, ಕಾಡು ಕುರುಬರು ಸೇರಿ 2 ದಿನಗಳ ಕಾಲ ಕುಣಿದು ಕುಪ್ಪಳಿಸುತ್ತಾ, ಸಿಕ್ಕ ಸಿಕ್ಕವರನ್ನು ಬೈಯುತ್ತಾ ಸಂಭ್ರಮಿಸುವ ಆಚರಣೆಯೇ ‘ಕುದುರೆ ಹಬ್ಬ’ ಈ ಹಬ್ಬವನ್ನು ಕೆಲವರು ‘ಬೇಡುಹಬ್ಬ’ ಎಂದು ಕೊಡ ಕರೆಯುತ್ತಾರೆ.
ಇಲ್ಲಿ ನಡೆಯುವ ಹಬ್ಬದ ವಿಶೇಷತೆಯೆಂದರೆ ಹರಕೆ ಹೊತ್ತವರು ಕಾಡಿನೊಳಗಿನ ಹಾಡಿಗಳಲ್ಲಿ ಮತ್ತು ಕಾಫಿ ತೋಟದಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ವರ್ಷಕ್ಕೆ ಒಮ್ಮೆ ಎರಡು ದಿನಗಳ ಕಾಲ ತಮಗೆ ಇಷ್ಟವಾದ ವೇಷ ಧರಿಸಿಕೊಂಡು ಕಾಡಿನಿಂದ ನಾಡಿಗೆ ಬಂದು ಪಟ್ಟಣದ ಅಂಗಡಿಗಳ ಮುಂದೆ ಹಾಗೂ ಎದುರಿಗೆ ಸಿಕ್ಕವರನ್ನು ಅಡ್ಡಗಟ್ಟಿ ಬೈಯುತ್ತಾ, ತೋಟದ ಮಾಲೀಕರನ್ನು ಕೂಡ ಆಶ್ಲೀಲವಾಗಿ ಬೈಯುತ್ತಾ ಹಣ ವಸೂಲಿ ಮಾಡುತ್ತಾರೆ.
ಕೊಡಗು ಜಿಲ್ಲೆ ಪಾಲಿಬೆಟ್ಟ, ಸಿದ್ದಾಪುರ, ಅಮ್ಮತ್ತಿ, ಗೋಣಿಕೊಪ್ಪ, ತಿತಿಮತಿ, ಇನ್ನಿತರ ಗ್ರಾಮಗಳು ಮಾತ್ರವಲ್ಲದೆ ನೆರೆಯ ಮೈಸೂರು ಜಿಲ್ಲೆಯಿಂದಲೂ ಗಿರಿಜನರು ಈ ಹಬ್ಬಕ್ಕೆ ಆಗಮಿಸುತ್ತಾರೆ. ಜಿಲ್ಲೆಯ ವಿವಿಧೆಡೆ ಎರಡು ದಿನಗಳ ಕಾಲ ಜನತೆಯಿಂದ ಹಣ ವಸೂಲಿ ಮಾಡುತ್ತಾರೆ. ಹಣ ನೀಡದಿದ್ದರೆ ಕೆಟ್ಟ ಕೆಟ್ಟ ಬೈಗುಳದ ಗಿಫ್ಟ್ ಸಿಗುತ್ತದೆ. ಆದ್ದರಿಂದ ಇಲ್ಲಿ ನಡೆಯುವ ಹಬ್ಬ ಬೈಗುಳದ ಹಬ್ಬ ಎಂದು ನಾಮಾಂಕಿತವಾಗಿದೆ.
ಕುಂಡೆ.. ಕುಂಡೇ.. ಕುಂಡೆ ನೋಡು.. ಆಹಾ ಒಳ್ಳೆ ಕುಂಡೆ.. ಆಹಾ ಕೆಟ್ಟ ಕುಂಡೆ.. ಕುಂಡೆಗೆ ಲಕ್ಸ್ ಸೋಪು.. ಎಂಬ ಬಗೆಬಗೆಯ ಕುಂಡೆ ಹಾಡುಗಳು ಈ ಗಿರಿಜನರ ಬಾಯಲ್ಲಿ ಹೊರಹೊಮ್ಮುತ್ತವೆ. ಕೊನೆಗೆ ಎಲ್ಲ ಗಿರಿಜನರು ಬಂದು ಸೇರುವುದು ಅಯ್ಯಪ್ಪ-ಭದ್ರಕಾಳಿ ದೇವಾಲಯದಲ್ಲಿ ತಾವು ವಸೂಲಿ ಮಾಡಿದರಲ್ಲಿ ಸ್ವಲ್ಪ ಹಣವನ್ನು ದೇವರಿಗೆ ಭಂಡಾರ ರೂಪದಲ್ಲಿ ಒಪ್ಪಿಸಿ ಉಳಿದ ಹಣವನ್ನು ಖರ್ಚು ಮಾಡುತ್ತಾರೆ.
ದೇವಾಲಯಕ್ಕೆ ವಿವಿಧೆಡೆಯಿಂದ ಜನರ ಆಗಮನ
ಈ ಉತ್ಸವವನ್ನು ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡುತ್ತಾರೆ. ಚಿತ್ರವಿಚಿತ್ರ ವೇಷಧಾರಿಗಳು ಒಟ್ಟೊಟ್ಟಿಗೆ ಕುಣಿದು ಕುಪ್ಪಳಿಸುವ ದೃಶ್ಯವನ್ನು ಬೇಡು ಹಬ್ಬದ ಸಮಯದಲ್ಲಿ ಕಣ್ಣುಂಬಿಕೊಳ್ಳಬಹುದು. ಕಾಡಿನಲ್ಲಿ ಸಿಗುವ ಸೊಪ್ಪು, ಹರಿದ ಹಳೆಯ ಬಟ್ಟೆ, ಗೋಣಿಚೀಲಗಳು, ಹೀಗೆ ಕೈಗೆ ಸಿಕ್ಕುವ ವಿವಿಧ ವಸ್ತುಗಳಿಂದ ವಿವಿಧ ವೇಷಗಳನ್ನು ತೊಟ್ಟು, ಒಣಗಿದ ಸೋರೆಕಾಯಿ ಬುರುಡೆ, ಪ್ಲಾಸ್ಟಿಕ್ ಡಬ್ಬ ಹಾಗೂ ಟಿನ್ನುಗಳನ್ನೇ ತಾಳಮೇಳ ಮಾಡಿಕೊಂಡು ಡೊಳ್ಳಿನ ರೀತಿಯಲ್ಲಿ ಬಡಿಯುತ್ತಾ ಆಕರ್ಷಕವಾಗಿ ಶಬ್ದ ಹೊರಡಿಸುತ್ತಾ ಆ ಶಬ್ದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ, ಸಿಕ್ಕ ಸಿಕ್ಕಿದವರನ್ನು ಕೆಟ್ಟ ಪದಗಳಿಂದ ನಿಂದಿಸಿ ಭಿಕ್ಷಾಟನೆ ಮಾಡುತ್ತಾ ಹಣ ಹಾಗೂ ದವಸ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ನಂತರ ದೇವಾಲಯದಲ್ಲಿ ಇಂತಿಷ್ಟು ಸಂಗ್ರಹಿಸಿದ ಹಣವನ್ನು ಭಂಡಾರಕ್ಕೆ ಸಲ್ಲಿಸುವುದು ವಾಡಿಕೆ. ಮಧ್ಯಾಹ್ನದ ನಂತರ ಕಿರಾತೇಶ್ವರ, ಭದ್ರಕಾಳಿ ದೇವಾಲಯದ ಮುಂಭಾಗಕ್ಕೆ ಆಗಮಿಸುವ ವಿವಿಧ ವೇಷಧಾರಿಗಳು ಅಲ್ಲಿ ಕುಣಿಯುತ್ತ ನಂತರ ದೇವರಿಗೆ ಭಂಡಾರ ಹಾಕಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ತೆರಳುತ್ತಾರೆ. ಜಿಲ್ಲೆಯ ವಿವಿಧೆಡೆಗಳಿಂದ ಮತ್ತು ರಾಜ್ಯದ ಹಲವು ಭಾಗಗಳಿಂದ ಇದನ್ನು ವೀಕ್ಷಿಸಲು ಅನೇಕರು ಬರುತ್ತಾರೆ.
ದೇವರಪುರ ಹೆಬ್ಬಾಲೆಯ ಸಣ್ಣುವಂಡ ಕುಟುಂಬದ ಮುಖ್ಯಸ್ಥರ ಮುಂದಾಳತ್ವದಲ್ಲಿ ದೇವಾಲಯ ಸಮೀಪದ ಅಂಬಲದಿಂದ ಭದ್ರಕಾಳಿ ಉತ್ಸವ ಮೂರ್ತಿಯನ್ನು ಮರದ ಕುದುರೆಯ ಮೂಲಕ ಅಯ್ಯಪ್ಪ ದೇವಾಲಯಕ್ಕೆ ತಂದು ಪೂಜಾ ಕಾರ್ಯಕ್ರಮ ಗಳನ್ನು ನೆರವೇರಿಸಲಾಗುತ್ತದೆ. ನಂತರ ಹರಕೆಹೊತ್ತವರು ಈ ಕೀಲು ಕುದುರೆ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ.