

ನರಗುಂದ: ಜನಸಾಮಾನ್ಯರಿಗೆ ಸುಲಭವಾಗಿ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕೆಂಬ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಯುಷ್ಮಾನ್ ಭಾರತ್ ಹಾಗೂ ಆಯುಷ್ಮಾನಭವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಿದ್ದಾರೆ. ಸುಂದರ, ಸ್ವಾಸ್ಥ್ಯ ಜೀವನಕ್ಕಾಗಿ ದೇಶದ ಪ್ರತಿಯೊಬ್ಬರೂ ಯೋಜನೆಯ ಸದುಪಯೋಗಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ರೇಣುಕಾ ಕೊರವನವರ ಹೇಳಿದರು.
ಪಟ್ಟಣದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಬುಧವಾರ ಏರ್ಪಡಿಸಿದ್ದ ಕೇಂದ್ರ ಸರ್ಕಾರದ ಆಯುಷ್ಮಾನ್ ಭವ್ ಶುಭಾರಂಭಕ್ಕೆ ನವದೆಹಲಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ನಡೆಸಿದ ವರ್ಚುವಲ್ ಕಾನ್ಪ್ರೆನ್ಸ್ ನೇರ ಪ್ರಸಾರ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದ ಎಲ್ಲ ನಿವಾಸಿಗಳಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಲಾಗಿದೆ. ಈ ಮಹತ್ವದ ಯೋಜನೆಯಡಿ ನರಗುಂದ ಪಟ್ಟಣ ಸೇರಿ ತಾಲೂಕಿನ ವಿವಿಧ 15 ಗ್ರಾಮ ಒನ್ ಕೇಂದ್ರಗಳ ಮೂಲಕ ಈಗಾಗಲೇ 21,171 ಫಲಾನುಭವಿಗಳು ಆರೋಗ್ಯ ಕಾರ್ಡ್ ಪಡೆದಿದ್ದಾರೆ. ಗಂಭೀರ ಕಾಯಿಲೆಗಳಿಗೆ ತುತ್ತಾದ 1457 ಫಲಾನುಭವಿಗಳು ಗರಿಷ್ಠ 5ಲಕ್ಷ ರೂ. ಮೊತ್ತದವರೆಗಿನ ಗುಣಮಟ್ಟದ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮ ದಿನದ ಅಂಗವಾಗಿ ಸೆ. 17ರಂದು ಪ್ರಾರಂಭಗೊಳ್ಳಲಿರುವ ಆಯುಷ್ಮಾನ ಭವ್ ಯೋಜನೆಯಡಿ ಪ್ರತಿಯೊಬ್ಬರಿಗೆ 5 ಲಕ್ಷ ರೂ. ವರೆಗೆ ಆರೋಗ್ಯ ವಿಮೆ ಸೌಲಭ್ಯ, ಆಯುಷ್ಮಾನ್ಭಾರತ್ ಕಾರ್ಡ್ ವಂಚಿತರಿಗೆ 3ನೇ ಹಂತದ ಕಾರ್ಡ್ಗಳ ವಿತರಣೆ, ಪ್ರತಿ ಮಂಗಳವಾರ ತಾಲೂಕಿನ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಮೇಳ, ಮೆಡಿಕಲ್ ಕಾಲೇಜ್ಗಳಲ್ಲಿನ ರೋಗಿಗಳಿಗೆ ಉಚಿತ ತಪಾಸಣಾ ಶಿಬಿರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ವರುಣ ಸವದಿ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಮುತವಾಡ, ರಾಮಣ್ಣ ಕಳ್ಳಿಗುಡ್ಡ, ಜಿ.ಬಿ. ಕೊಣ್ಣೂರ, ನೀಲಕಂಠ ಮಡಿವಾಳಕರ, ಮಲ್ಲಿಕಾರ್ಜುನ ಹಿರೇಮಠ, ಕಿರಣ ಜೋಶಿ, ಎಸ್.ಬಿ. ಕುರಹಟ್ಟಿ, ಈರಣ್ಣ ಮೇಟಿ, ಸಿ.ಎಫ್. ಕುಂಬಾರ, ಎಸ್.ಎಚ್. ಕಲೂತಿ, ಪ್ರದೀಪ ಎಸ್.ಕೆ, ನಾಗರಾಜ ಗಾಣಿಗೇರ, ಅಕೀಬ್ಜಾವೇದ್ ಹುಲ್ಲೂರ, ಬಿ.ಕೆ. ಪಾಟೀಲ, ವಿಕ್ರಂ ಬೂಸರಡ್ಡಿ, ಪ್ರಶಾಂತ ಕುಲಕರ್ಣಿ, ನಾಗರಾಜ ವಿಠಪ್ಪನವರ, ಎಂ.ಪಿ. ಶಿಗ್ಗಾಂವಕರ್, ಎಫ್.ಎಚ್. ಹೆಬ್ಬಳ್ಳಿ, ಎಸ್.ಎಸ್. ಅಂಗಡಿ, ಬಿ.ಎಂ. ಕೌಜಗೇರಿ, ಎಂ.ಎಂ. ಮಸೂತಿಮನಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.