

ಸೋಮವಾರಪೇಟೆ: ಪಟ್ಟಣದ ಆಯುಷ್ ಇಲಾಖೆಯ ಆಯುರ್ವೇದಿಕ್, ಹೋಮಿಯೋಪಥಿ ಮತ್ತು ನ್ಯಾಚುರೋಪಥಿ ಆಸ್ಪತ್ರೆಯಲ್ಲಿನ 64 ಲಕ್ಷ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಮಂತರ್‌ಗೌಡ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಜಿಲ್ಲಾ ಪಂಚಾಯಿತಿಯಿಂದ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಗುಣಮಟ್ಟದಾಗಿರುಬೇಕು. ಆಯುಷ್ ಇಲಾಖೆಯ ಆಸ್ಪತ್ರೆಯಲ್ಲಿ ಉತ್ತಮ ಅರೋಗ್ಯಸೇವೆ ಸಿಗುತ್ತಿದೆ. ವಾರದಲ್ಲಿ 50 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳು ದೂರದೂರಿಗೆ ಹೋಗಿ ಹಣ ಖರ್ಚು ಮಾಡಿಕೊಳ್ಳಬಾರದು ಹಾಗೂ ಸ್ಥಳೀಯವಾಗಿಯೇ ಉಚಿತ ಅರೋಗ್ಯ ಚಿಕಿತ್ಸೆ ನೀಡಬೇಕೆಂಬ ಉದ್ದೇಶ ಸರ್ಕಾರಕಿದ್ದು ಜನರು ಆಸ್ಪತ್ರೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅಲ್ಟ್ರಾಸೌಂಡ್ ಮಸಾಜ್ ಸೆಂಟರ್ ಕೂಡ ಇದೆ ಎಂದು ಹೇಳಿದರು.
ಹೈಟೆಕ್ ಪಂಚಕರ್ಮ ಘಟಕ, ಶಸ್ತ್ರಚಿಕಿತ್ಸಾ ಘಟಕ, ಹಳೆಯ ಕಟ್ಟಡ ದುರಸ್ತಿ ಕಾಮಗಾರಿ ನಡೆಯಲಿದೆ. ಆಸ್ಪತ್ರೆಯಲ್ಲಿ ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕಾಂತರಾಜು, ಸೂಡ ಅಧ್ಯಕ್ಷ ಕೆ.ಎ.ಆದಂ, ಆಯುಷ್ ಇಲಾಖೆಯ ಜಿಲ್ಲಾ ಅಧಿಕಾರಿ ಡಾ.ಶ್ವೇತಾ, ಆಡಳಿತಾಧಿಕಾರಿ ಕಾವೇರಪ್ಪ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಅರುಣ್, ಶೀಲಾ ಡಿಸೋಜಾ, ಮೃತ್ಯುಂಜಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ಡಿ.ಯು.ಕಿರಣ್, ಶಾಸಕರ ಆಪ್ತಸಹಾಯಕ ಕಿರಣ್ ಇತರರು ಇದ್ದರು.