

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಕವತ್ತಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರಕ್ಕೆ ಚಾಲನೆ ನೀಡಲಾಗಿದ್ದು, ಭಕ್ತರು ಎಲ್ಲ ರೀತಿಯಲ್ಲಿ ಸಹಕಾರ ನೀಡಬೇಕು ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ವೇದವ್ಯಾಸ ತಂತ್ರಿ ಹೇಳಿದರು.
ನೂತನ ದೇಗುಲದ ಸಮಗ್ರ ಜೀರ್ಣೋದ್ಧಾರದ ಬಗ್ಗೆ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉಭಯ ಜಿಲ್ಲೆಯ ಲಕ್ಷಾಂತರ ಮಂದಿಗೆ ಆದಿ ಆಲಡೆ ಶ್ರೀ ಕ್ಷೇತ್ರ ಕವತ್ತಾರು ಆಗಿದ್ದು, ಪ್ರತಿ ವರ್ಷ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ. ಕಾಲಕ್ಕೆ ಅನುಗುಣವಾಗಿ ಎಲ್ಲ ದೈವಸ್ಥಾನ, ದೇವಸ್ಥಾನಗಳು ಜೀರ್ಣೋದ್ಧಾರ ಕಾಣುತ್ತಿವೆ. ಅದೇ ರೀತಿ ಕವಾತ್ತಾರು ಕ್ಷೇತ್ರ ಕೂಡ ಜೀರ್ಣೋದ್ಧಾರಕ್ಕೆ ಅಣಿಯಾಗುತ್ತಿದೆ. ಭಕ್ತರೆಲ್ಲರೂ ಕೈ ಜೋಡಿಸಿದರೆ ಕೆಲಸ ಉತ್ತಮವಾಗಿ ಸಾಗಲಿದೆ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷೆ ಬಳ್ಕುಂಜೆಗುತ್ತು ಮಲ್ಲಿಕಾ ಯಶವಂತ ಶೆಟ್ಟಿ ಮಾತನಾಡಿದರು. ಈ ಸಂದರ್ಭ ಜೀರ್ಣೋದ್ಧಾರದ ಮನವಿ ಪತ್ರ ಮತ್ತು ಈ ಬಾರಿಯ ಆಯನದ ಅಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಕ್ಷೇತ್ರದ ಅರ್ಚಕರಾದ ದೇಂದಡ್ಕ ವಿಷ್ಣುರಾಜ ಭಟ್ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ನೀನಾ ನಿತ್ಯಾನಂದ ಅಜಿಲ, ಡಾ.ನಿತ್ಯಾನಂದ ಶೆಟ್ಟಿ, ಅಶೋಕ್ ಶೆಟ್ಟಿ, ಪುತ್ತೂರ ಬಾವ ಮೋಹನ್ ಶೆಟ್ಟಿ, ಗರುಡಾಡಿ ಚಾಮುಂಡೇಶ್ವರಿ ಕ್ಷೇತ್ರದ ವಿಠಲ ಪೂಜಾರಿ, ಕೋಶಾಧಿಕಾರಿ ದೇವಿ ಪ್ರಸಾದ ಅಜಿಲ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಬಳ್ಕುಂಜೆ ಸ್ವಾಗತಿಸಿದರು.