

ಪಾಂಡವಪುರ: ಮಂಡ್ಯ ಜಿಲ್ಲೆಯಲ್ಲೂ ಹೆಣ್ಣು ಭ್ರೂಣ ಹತ್ಯೆಯಂತಹ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದ್ದು ಬೇಸರದ ಸಂಗತಿ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಬೇಬಿ ಬೆಟ್ಟದ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಸಮುದಾಯ ಆರೋಗ್ಯ ಕೇಂದ್ರ ಚಿನಕುರಳಿ ವತಿಯಿಂದ ಗುರುವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ಲಿಂಗ ತಾರತಮ್ಯ ಮಾಡದೆ ಹೆಣ್ಣು, ಗಂಡು ಯಾವುದಾದರೂ ಸಮಾನವಾಗಿ ಸ್ವೀಕರಿಸಬೇಕು. ಭ್ರೂಣ ಹತ್ಯೆ ಬಗ್ಗೆ ಅರಿವು ಮೂಡಿಸುವಂತಹ ಬಹು ದೊಡ್ಡ ಕಾರ್ಯಕ್ರಮ ರಾಜ್ಯದಲ್ಲಿ ಆಗಬೇಕಿದೆ. ಲಿಂಗ ಪತ್ಯೆ ಶಿಕ್ಷಾರ್ಹ ಅಪರಾಧವಾದರೂ ಅಲ್ಲಲ್ಲಿ ಬೆಳಕಿಗೆ ಬರುತ್ತಿದೆ. ಭ್ರೂಣ ಲಿಂಗ ಪತ್ತೆ ಮಾಡುವವರು ಮತ್ತು ಅದಕ್ಕೆ ಸಹಕರಿಸಿದವರಿಗೆ ಕಾನೂನು ಚೌಕಟ್ಟಿನಲ್ಲಿ ಉಗ್ರ ಶಿಕ್ಷೆಗೆ ಗುರಿಪಡಿಸುವ ಮೂಲಕ ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದರು.
ಪಟ್ಟಣದ ಉಪವಿಭಾಗೀಯ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸಿ.ಎ.ಅರವಿಂದ್ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ ಬಗ್ಗೆ ವ್ಯಾಪಕವಾಗಿ ಜನರಿಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಈಗಾಗಲೇ ರಾಜ್ಯದಲ್ಲಿ ಹೆಣ್ಣು ಮಕ್ಕಳ ಅನುಪಾತ ಕಡಿಮೆಯಾಗುತ್ತಿದೆ. ಸಾರ್ವಜನಿಕರು ಭ್ರೂಣ ಹತ್ಯೆ ವಿಚಾರ ಗೊತ್ತಾದರೆ ತಕ್ಷಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಹತ್ಯೆ ತಡೆಗಟ್ಟಲು ಸಹಕರಿಸಬೇಕು. ಸಮಾಜದಲ್ಲಿ ಹೆಣ್ಣನ್ನು ಕೀಳಾಗಿ ಕಾಣುವ ಮನಸ್ಥಿತಿ ಬಿಡಬೇಕು. ಪ್ರಧಾನಿ, ರಾಷ್ಟ್ರಪತಿಯಂತಹ ಸಾಂವಿಧಾನಿಕ ಹುದ್ದೆಗಳನ್ನು ಮಹಿಳೆಯರು ಅಲಂಕರಿಸಿದ್ದಾರೆ. ಅವರಿಗೆ ಪ್ರೋತ್ಸಾಹ ಸಿಕ್ಕರೆ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡುತ್ತಾರೆ ಎಂದು ತಿಳಿಸಿದರು.
ಬೇಬಿ ಬೆಟ್ಟದ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ, ಟಿಎಚ್‌ಒ ಧನಂಜಯ, ರೈತಸಂಘ ಮುಖಂಡರಾದ ಎಸ್.ದಯಾನಂದ, ಕುರುಬರ ಸಂಘದ ತಾಲೂಕು ಅಧ್ಯಕ್ಷ ಹುಚ್ಚೇಗೌಡ, ಹಾರೋಹಳ್ಳಿ ಲಕ್ಷ್ಮೇಗೌಡ, ಬೇಬಿ ಕುಮಾರ್, ದಸಂಸ ಮುಖಂಡ ಡಿ.ಕೆ.ಅಂಕಯ್ಯ ಇತರರು ಇದ್ದರು.