

ಯಳಂದೂರು: ಪ್ರತಿ ವರ್ಷ ಪಟ್ಟಣದ ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯದ ಮುಂಭಾಗ ಪಟಾಕಿ ಅಂಗಡಿಗಳನ್ನು ತೆರೆಯಲಾಗುತ್ತಿತ್ತು. ಆದರೆ ಈ ಬಾರಿ ಪಟ್ಟಣದ ಹೊರ ವಲಯದಲ್ಲಿರುವ ಪ್ರವಾಸಿ ಮಂದಿರದ ಮುಂಭಾಗ ಸ್ಥಳೀಯ ಪಟ್ಟಣ ಪಂಚಾಯಿತಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರವಾನಗಿ ಪಡೆದುಕೊಂಡ 5 ಪಟಾಕಿ ಅಂಗಡಿಗಳನ್ನು ಶನಿವಾರದಿಂದಲೇ ತೆರೆಯಲಾಗಿದ್ದು, ವ್ಯಾಪಾರ ಜೋರಾಗಿ ಸಾಗಿದೆ.
ಹಸಿರು ಪಟಾಕಿಗೆ ಆದ್ಯತೆ: ಪರಿಸರಕ್ಕೆ ಮಾರಕವಾಗದ ಪಟಾಕಿ ಸಿಡಿಸಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಸದಸ್ಯರು ಪ್ರತಿ ತಾಲೂಕಿನ ಪರವಾನಗಿ ಪಡೆದ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸ್ಯಾಂಪಲ್ ಸಂಗ್ರಹಿಸಿ ಹೋಗಿದ್ದಾರೆ. ವಿದೇಶಿ ಪಟಾಕಿಗಳು ಪ್ಲಾಸ್ಟಿಕ್‌ನಿಂದ ಕೂಡಿರುತ್ತವೆ. ಇದು ಒಂದೆಡೆ ಅತೀ ಹೆಚ್ಚು ಡೆಸಿಬಲ್ ಶಬ್ಧವನ್ನು ಹೊರಹೊಮ್ಮಿಸಿ ಶಬ್ಧ ಮಾಲಿನ್ಯ ಉಂಟುಮಾಡುತ್ತದೆ. ಜತೆಗೆ ಪ್ಲಾಸ್ಟಿಕ್ ಪರಿಸರಕ್ಕೆ ಹಾನಿ ಮಾಡುವುದರಿಂದ ವಿದೇಶಿ ಪಟಾಕಿಗಳಿಗೆ ನಿಷೇಧ ಹೇರಲಾಗಿದೆ.
ಪಟಾಕಿ ಪರವಾನಗಿಯನ್ನು ಜಿಲ್ಲಾಡಳಿತ ನೀಡಿದೆ. ಇದಕ್ಕೆ 37 ಷರತ್ತುಗಳನ್ನು ವಿಧಿಸಿದೆ. ಅಂಗಡಿ ನಿರ್ಮಾಣಕ್ಕೆ ಯಳಂದೂರು ಪಟ್ಟಣ ಪಂಚಾಯಿತಿ ತಾತ್ಕಾಲಿಕ ಅನುಮತಿಯನ್ನು ನೀಡಲಾಗಿದೆ. ಇದರೊಂದಿಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಅಂಗಡಿಯನ್ನು ರಸ್ತೆಯ ಅಂಚಿನಿಂದ 10 ಮೀಟರ್ ದೂರದಲ್ಲಿ ಇಡಬೇಕು, ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಕಡ್ಡಾಯವಾಗಿ 3 ಮೀಟರ್ ಅಂತರವಿರಬೇಕು. ಅಂಗಡಿಯ ಅಳತೆ 8*10 ಅಡಿಗಿಂತ ಹೆಚ್ಚಾಗಿರಬಾರದು. ಅಂಡಿಗಳಲ್ಲಿ ಸೀಮೆಎಣ್ಣೆ ದೀಪ, ಪೆಟ್ರೋಲ್‌ಮ್ಯಾಕ್ಸ್‌ಗಳ ಬಳಕೆ ನಿಷಿದ್ಧ. ವಿದ್ಯುತ್ ಅನ್ನು ಸೀಲಿಂಗ್ ವೈರ್ ಬಳಸಿ ಉಪಯೋಗಿಸಬೇಕು. ಬೆಂಕಿ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ನೀರು ಹಾಗೂ ಮರಳನ್ನು ಕಡ್ಡಾಯವಾಗಿ ಪ್ರತಿ ಅಂಗಡಿಯ ಬಳಿಯಲ್ಲೂ ಇಡಬೇಕು. 18 ವರ್ಷ ಒಳಗಿನವರಿಗೆ ಪಟಾಕಿ ಮಾರಾಟ ನಿಷಿದ್ಧ, ಅಂಗಡಿಗಳ ಸುತ್ತಳತೆಯ 50 ಮೀಟರ್ ಬಳಿಯಲ್ಲಿ ಪಟಾಕಿಗಳನ್ನು ಸುಡಬಾರದು ಕಡ್ಡಾಯವಾಗಿ ಸಂಬಂಧಪಟ್ಟ ಇಲಾಖೆಗಳ ಸೂಚನೆ ಸಲಹೆಗಳನ್ನು ಪಾಲಿಸಬೇಕು ಎಂದು ಷರತ್ತುಗಳನ್ನು ವಿಧಿಸಿ ಪರವಾನಗಿ ನೀಡಲಾಗಿದೆ.
ಲಕ್ಷಾಂತರ ರೂ.ವಹಿವಾಟು: ಪ್ರತಿ ವರ್ಷವೂ ಯಳಂದೂರು ತಾಲೂಕಿನಲ್ಲಿ ಲಕ್ಷಾಂತರ ರೂ.ಗಳ ಪಟಾಕಿ ವಹಿವಾಟು ನಡೆಯುತ್ತದೆ. ಪುಟ್ಟ ತಾಲೂಕು ಹಾಗೂ ಪಟ್ಟಣವಾಗಿರುವ ಯಳಂದೂರಿನಲ್ಲಿ ಪಟ್ಟಣದಲ್ಲಿ ಮಾತ್ರ ಅಧಿಕೃತ ಪರವಾನಗಿ ಪಡೆದ ಅಂಗಡಿಗಳನ್ನು ತೆರೆಯುವುದರಿಂದ ಇಡೀ ತಾಲೂಕಿನ ಜನರು ಇಲ್ಲಿಂದಲೇ ಪಟಾಕಿ ಖರೀದಿಸುತ್ತಾರೆ. ಕಳೆದ ಬಾರಿ 1ಲಕ್ಷ ರೂ.ಗಳಿಗಿಂತಲೂ ಹೆಚ್ಚಿನ ವ್ಯಾಪಾರವಾಗಿತ್ತು.
ಅಗ್ನಿಶಾಮಕ ಸಿಬ್ಬಂದಿಯಿಂದ ಜಾಗೃತಿ: ಚಾಮರಾಜನಗರ ಅಗ್ನಿ ಶಾಮಕದಳದ ಠಾಣಾಧಿಕಾರಿ ಶಿವಾಜಿರಾವ್‌ಪವಾರ್ ಸ್ಥಳಕ್ಕೆ ಭೇಟಿ ನೀಡಿ ಪಟಾಕಿ ಅಂಗಡಿ ಮುಂಭಾಗ ಜಾಗೃತಿ ಮೂಡಿಸಿದರು. ಕಡ್ಡಾಯವಾಗಿ ಎಲ್ಲರೂ ಅಂಗಡಿ ಮುಂಭಾಗ ನೀರು, ಮರಳನ್ನು ಇಡಬೇಕು, ಇಲ್ಲಿನ ಸುತ್ತಮುತ್ತ ಯಾವುದೇ ಕಾರಣಕ್ಕೂ ಬೆಂಕಿ ಬೀಳದಂತೆ ನೋಡಿಕೊಳ್ಳಬೇಕು, ಕಡ್ಡಾಯವಾಗಿ ಹಸಿರು ಪಟಾಕಿಗಳನ್ನೇ ಮಾರಾಟ ಮಾಡಬೇಕು ಎಂದು ಸೂಚನೆ ನೀಡಿದರು.