ಎಲ್ಲರೊಳಗಿನ ಅರಿವು ಸರ್ವಜ್ಞ

Sarvjna
Published on

| ಡಾ.ಮಲ್ಲಿಕಾರ್ಜುನ ಗುಮ್ಮಗೋಳ

ಮಹಾಜ್ಞಾನಿ ಸರ್ವಜ್ಞ ಜನಮಾನಸದ ಕವಿಯಾಗಿ ಅರುಹಿದ ಅನುಭಾವ, ವಿವೇಕವು ಎಲ್ಲ ಕಾಲಕ್ಕೂ ಸ್ಪೂರ್ತಿಯ ಜ್ಯೋತಿಯಾಗಿ ಬೆಳಗುವಂತಹದು. ಅವನ ಮಾತುಗಳು ಶ್ರೀಸಾಮಾನ್ಯನ ವೇದಗಳಾದವು, ಕನ್ನಡದ ಗಾದೆಗಳಾದವು. ಈ ಲೋಕದಲ್ಲಿ ಕಂಡುಂಡ ಸಿಹಿಕಹಿ ಸತ್ಯವನ್ನು ಖಂಡತುಂಡವಾಗಿ ತನ್ನ ತ್ರಿಪದಿಗಳಲ್ಲಿ ಕಂಡರಿಸುತ್ತ ಸಾಗಿದ ಕಾಲಜ್ಞಾನಿ. ಸರ್ವಜ್ಞ ಎಂಬ ಅಂಕಿತ ನಾಮದ ಮೂಲ ಯಾರು, ತನ್ನ ರೂಪ ಎಂತಹುದು, ಜನ್ಮಜಾತಕ, ಕಾಲ-ಕುಲ ಯಾವುದು ಎಂಬುದನ್ನು ಈ ಲೋಕಕ್ಕೆ ದಕ್ಕಗೊಡದೆ ನಿರ್ವಿಕಲ್ಪ ಸಂತನಾಗಿ ಈ ನಾಡಿನಲ್ಲಿ ಹಾಡುತ್ತ ಆಡುತ್ತ ಸುಮ್ಮನೆ ಪರಿವ್ರಾಜಕನಾಗಿ ನಡೆದುಹೋದ. ಆತನ ವಚನಗಳಲ್ಲಿ ಸಿಕ್ಕ ಸುಳಿವಿನ ಆಧಾರದ ಮೇಲೆ ಆತನ ಬದುಕಿನ ಚರಿತ್ರೆಯನ್ನು ಕಲ್ಪಿಸಬಹುದಾಗಿದೆ.

ಸರ್ವಜ್ಞನ ಕಾಲ 16ನೇ ಶತಮಾನ. ಹಾವೇರಿ ಜಿಲ್ಲೆಯ ಅಂಬಲೂರ ಹುಟ್ಟೂರು.

ಮುನ್ನ ಪೂರ್ವದಲಾನು ಫನ್ನಗಧರನಾಳು

ಎನ್ನಯ ಪೆಸರು ಪುಷ್ಪದತ್ತನು- ಎಂದು

ಮನ್ನಿಪರು ನೋಡ ಸರ್ವಜ್ಞ

ಎಂಬ ವಚನವನ್ನು ಅವಲೋಕಿಸಿದರೆ ಸರ್ವಜ್ಞನ ಹೆಸರು ಪುಷ್ಪದತ್ತನಿರಬಹುದು ಎಂದು ಅನಿಸುತ್ತದೆ. ಸರ್ವಜ್ಞ ಎಂಬುದು ಆತನ ಅಂಕಿತನಾಮ ಅಥವಾ ಬಿರುದಾಗಿತ್ತು ಎಂದು ಊಹಿಸಲಾಗಿದೆ. ಸರ್ವಜ್ಞನ ವಚನಗಳ ಆಧಾರದಲ್ಲಿ ಹೇಳುವುದಾದರೆ ಆತ ಲಿಂಗಾಯತ ವೀರಶೈವ ಪರಂಪರೆಗೆ ಸೇರಿದವನಾದರೂ ಜಾತಿಮತಗಳ ಮೀರಿ ನಿಂತ ವಿರಕ್ತನೆಂಬುದು ಸಾಬೀತಾಗುತ್ತದೆ.

ನೂರು ಪದಗಳಲ್ಲಿ ಹೇಳಲಾಗದ್ದನ್ನು ಕೇವಲ ಮೂರು ಸಾಲಿನ ಅಚ್ಚಗನ್ನಡದ ಛಂದಸ್ಸಿನಲ್ಲಿ ಹೇಳಿ, ಲೌಕಿಕ ಮತ್ತು ಪಾರಮಾರ್ಥಿಕ ಲೋಕದರ್ಶನ ಮಾಡಿಸುವ ಅವನ ವಚನ ವಾšಯದ ಪರಿ ವಿಸ್ಮಯವಾದುದು. ಬಸವೋತ್ತರ ಕಾಲದಲ್ಲಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಅಪೂರ್ವ ವಾಗ್ಗೇಯಕಾರ. ಸರ್ವಜ್ಞನ ತ್ರಿಪದಿಳು ಸಮಗ್ರ ಜೀವನಕಥನ ಮೇಳೈಸಿದ ವಿವೇಕವಾಣಿ. ಲಿಂಗದಲಿ ಮನವಾಗಿ ಲಿಂಗದಲಿ ನೆನಹಾಗಿ

ಲಿಂಗದಲಿ ನೋಟ-ನುಡಿ-ಕೂಟವಾದವನು

ಲಿಂಗವೇ ಅಕ್ಕು ಸರ್ವಜ್ಞ

ಆಗಿಲ್ಲ ಹೋಗಿಲ್ಲ ಮೇಗಿಲ್ಲ ತಳಗಿಲ್ಲ

ತಾಗಿಲ್ಲ ತಪ್ಪು ತಡಹಿಲ್ಲ-ಲಿಂಗಕ್ಕೆ

ದೇಗುಲವಿಲ್ಲ ಸರ್ವಜ್ಞ

ಅನ್ನ ದೇವರಿಗಿಂತ ಇನ್ನು ದೇವರು ಇಲ್ಲ

ಅನ್ನಕೆ ಮೇಲು ಹಿರಿದಿಲ್ಲ-ಲೋಕಕ್ಕೆ

ಅನ್ನವೇ ಪ್ರಾಣ ಸರ್ವಜ್ಞ

ಇಂತಹ ಭಕ್ತಿಸ್ಥಲ, ಶರಣಸ್ಥಲ, ಐಕ್ಯಸ್ಥಲದ ತ್ರಿಪದಿಗಳನ್ನು ಗಮನಿಸಿದರೆ ‘ಇಹಲೋಕವೆಂಬುದು ಕರ್ತಾರನ ಕಮ್ಮಟ, ಸ್ವರ್ಗಲೋಕ ಮೃತ್ಯಲೋಕ ಬೇರಿಲ್ಲ ಕಾಣಿರೋ’ ಎಂಬ ಬಸವಾನುಭವದ ನೆನಪಾಗುತ್ತದೆ.

ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ

ರಸಿಕನಲ್ಲದನ ಬರಿಮಾತು ಕಿವಿಯೊಳ್ಕೂ-

ರ್ದಸಿಯ ಬಡಿದಂತೆ ಸರ್ವಜ್ಞ

ಎನ್ನುವ ಋಷಿ ‘ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಹೇಳದ ವಿಷಯವಿಲ್ಲ’ ಎನ್ನುವಂತೆ ದೇವ, ಧರ್ಮ, ಅಧ್ಯಾತ್ಮ, ಕಾಲಜ್ಞಾನ, ಜ್ಯೋತಿಷ, ನೀತಿ, ರಾಜನೀತಿ, ದಾನ, ಯೋಗ, ತತ್ವ, ಕಲೆ, ಶಿಕ್ಷಣ, ಸಂಗೀತ, ಒಗಟು, ವ್ಯವಹಾರ, ಒಕ್ಕಲು, ದಾಂಪತ್ಯ, ಸುಖ-ದುಃಖ, ಸ್ವರ್ಗ-ನರಕ ಮುಂತಾದ ವಿಷಯಗಳ ಕುರಿತು ವಚನ ದರ್ಶನ ಮಾಡಿಸುತ್ತಾನೆ.

ಸತ್ಯರಾ ನುಡಿ ತೀರ್ಥ ನಿತ್ಯರಾ ನಡೆ ತೀರ್ಥ

ಉತ್ತಮರ ಸಂಗವದು ತೀರ್ಥ, ಹರಿವ

ನೀರೆತ್ತಣದು ತೀರ್ಥ ಸರ್ವಜ್ಞ

ಎಂದು ಬದುಕಿನಲ್ಲಿ ನಡೆ ನುಡಿಯ ಮಹತ್ವ ಅರುಹುತ್ತಾನೆ.

‘ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ, ದೇವನೊಲಿದಾತನೆ ಜಾತ’, ‘ಹಂಗಿನ ಹಾಲಿಗಿಂತಂಬಲಿಯ ತಿಳಿಲೇಸು’, ‘ಹೊತ್ತಿಗೊದಗಿದ ಮಾತು ಸತ್ತವನು ಎದ್ದಂತೆ’, ದಾನ ಮಾಡದವನು ‘ಕೆಚ್ಚಲ ಮೇಲಿನ ಉಣ್ಣೆ’, ಭಕ್ತಿಯಿಲ್ಲದ ಪ್ರದಕ್ಷಿಣೆ ‘ಎತ್ತು ಗಾಣವ ಹೊತ್ತು ಸುತ್ತಿ ತಾ ಬಂದಂತೆ’ ಹೀಗೆ ಉಪಮೆ, ರೂಪಕ, ದೃಷ್ಟಾಂತ, ವಿವೇಕ, ವಿಡಂಬನೆ ಮೂಲಕ ಹರಿವ ಅವನ ತ್ರಿಪದಿಗಳಲ್ಲಿ ನೀತಿಯದೇ ಪ್ರಾಧಾನ್ಯತೆ ಇದೆ.

‘ಕವಿಗಳಲ್ಲಿ ಎರಡು ಜಾತಿ: ವರ್ಣಕ, ದರ್ಶಕ ಎಂದು. ವರ್ಣಕರು ಎಲ್ಲರೂ ಕಂಡದನ್ನೇ ಸರಸವಾಗಿ ಬಣ್ಣಿಸುವವರು. ದರ್ಶಕರು- ಕಣ್ಣಿಗೆ ಕಾಣದ್ದನ್ನು ಅನ್ಯರು ಕಾಣುವಂತೆ ಮಾಡುವವರು. ಸರ್ವಜ್ಞ ಅಂಥ ದರ್ಶಕ ಕವಿ. ಅವನ ನೀತಿ ಬರಡು ಮಾತಲ್ಲ. ರಸಮಯವಾದ ಸುಭಾಷಿತ. ಹಾಸ್ಯವು ಕರುಣಾಶಾಲಿಯ ಶಲ್ಯತಂತ್ರ’ ಎಂದು ವರಕವಿ ಬೇಂದ್ರೆಯವರು ಸರ್ವಜ್ಞನ ಕವಿತೆ ಕುರಿತು ಹೇಳಿದ್ದಾರೆ.

ಸರ್ವಜ್ಞನೆಂಬುವನು ಗರ್ವದಿಂದಾದವನೆ

ಸರ್ವರೊಳಗೊಂದೊಂದು ನುಡಿಗಲಿತು

ವಿದ್ಯೆಯ ಪರ್ವತವೆ ಆದ ಸರ್ವಜ್ಞ

ಎಂದು ವಿನಮ್ರವಾಗಿ ಹೇಳುವ ಸತ್ಯಪ್ರೇಮಿ ಕವಿ, ಸಮಾಜ ವೈದ್ಯ ಸರ್ವಜ್ಞ.

(ಲೇಖಕರು ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net