

ಪುತ್ತೂರು ಗ್ರಾಮಾಂತರ: ಸ್ವಚ್ಛ ಗ್ರಾಮ, ಸ್ವಚ್ಛ ಪೇಟೆ ಎಂಬ ಧ್ಯೇಯದೊಂದಿಗೆ ಒಳಮೊಗ್ರು ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸಲುವಾಗಿ ಒಳಮೊಗ್ರು ಗ್ರಾಪಂ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ವತಿಯಿಂದ ಶುಕ್ರವಾರ ಕುಂಬ್ರ ಪೇಟೆಯ ಹಲವು ಹೋಟೆಲ್, ಬಾರ್, ಕೋಳಿ, ಮೀನು ಮಾಂಸದ ಅಂಗಡಿಗಳ ಪರಿಶೀಲಿಸಿ ಸ್ವಚ್ಛತಾ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಯಿತು.
ರಸ್ತೆ ಬದಿಗಳಲ್ಲಿ ಕೊಳಚೆ ನೀರು ಹರಿದು ಹೋಗುತ್ತಿರುವ ಕಡೆಗಳಲ್ಲಿ ಪರಿಶೀಲನೆ ನಡೆಸಿದ ಆರೋಗ್ಯ ಮತ್ತು ಗ್ರಾಮ ನೈರ್ಮಲ್ಯ ಸಮಿತಿ ಈ ಕುರಿತು ಸಂಬಂಧಪಟ್ಟವರಲ್ಲಿ ವಿಚಾರಿಸಿ, ತ್ಯಾಜ್ಯ ನೀರು ಇಂಗಲು ಇಂಗುಗುಂಡಿ ವ್ಯವಸ್ಥೆ ಮಾಡಿಕೊಂಡು ಅಂಗಡಿಮುಂಗಟ್ಟುಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸೂಚಿಸಿದರು. ಕೋಳಿ, ಮೀನು ಮೊದಲಾದ ಮಾಂಸದ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡುವಂತೆ ಹಾಗೂ ಒಣಕಸ, ಹಸಿಕಸಗಳನ್ನು ಪಂಚಾಯಿತಿ ಸ್ವಚ್ಛ ವಾಹಿನಿಗೆ ನೀಡಿ ಸ್ವಚ್ಛತಾ ವ್ಯವಸ್ಥೆ ಕಾಪಾಡಿಕೊಳ್ಳುವ ಕಾರ್ಯಕ್ಕೆ ಪ್ರತಿಯೊಬ್ಬರೂ ಸಹಕರಿಸುವಂತೆ ವರ್ತಕರಲ್ಲಿ ಮನವಿ ಮಾಡಿಕೊಳ್ಳಲಾಯಿತು.
ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ, ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಅಧ್ಯಕ್ಷೆ ರೇಖಾ ಯತೀಶ್, ಸದಸ್ಯರಾದ ವಿನೋದ್ ಶೆಟ್ಟಿ ಮುಡಾಲ, ಮಹೇಶ್ ರೈ ಕೇರಿ, ಶೀನಪ್ಪ ನಾಯ್ಕ, ಸಮುದಾಯ ಆರೋಗ್ಯ ಅಧಿಕಾರಿಗಳಾದ ವಿದ್ಯಾಶ್ರೀ, ಶಶಿಕಲಾ, ಪ್ರಾಥಮಿಕ ಆರೋಗ್ಯ ಸಹಾಯಕಿ ಪ್ರಮೀಳಾ, ಆಶಾ ಕಾರ್ಯಕರ್ತೆಯರಾದ ಚಂದ್ರಾವತಿ, ಗಿರಿಜಾ, ಶಶಿಕಲಾ, ಸರೋಜಿನಿ ಪಾಲ್ಗೊಂಡಿದ್ದರು.