ಮಳವಳ್ಳಿ ವಿವಿಧೆಡೆ ಜಾಗೃತಿ ಕಾರ್ಯಕ್ರಮ

ಮಳವಳ್ಳಿ ವಿವಿಧೆಡೆ ಜಾಗೃತಿ ಕಾರ್ಯಕ್ರಮ
Published on

ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಬುಧವಾರ ವಿಶ್ವ ಪರಿಸರ ದಿನ ಅಂಗವಾಗಿ ಗಿಡ ನೆಡುವುದು ಹಾಗೂ ಜಾಗೃತಿ ಕಾರ್ಯಕ್ರಮಗಳು ನಡೆದವು.

ತಾಲೂಕಿನ ಬ್ಯಾಡರಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಅರಣ್ಯ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರಧಾನ ಸಿವಿಲ್ ನ್ಯಾಯಾಧೀಶ ಸಚಿನ್ ಶಿವಪೂಜೆ ಸಸಿಗಳನ್ನು ನೆಟ್ಟು ನಂತರ ಮಾತನಾಡಿ, ಜೀವ ಸಂಕುಲದ ಉಳಿವಿಗಾಗಿ ಗಿಡಗಳನ್ನು ನೆಟ್ಟು ಪೋಷಿಸುವುದರ ಜತೆಗೆ ಮರಗಳ ಕಡಿಯುವುದನ್ನು ನಿಲ್ಲಿಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು. ನ್ಯಾಯಾಧೀಶೆ ಕಾವ್ಯಶ್ರೀ, ಅಪರ ಸರ್ಕಾರಿ ವಕೀಲ ಶ್ರೀಕಂಠಸ್ವಾಮಿ, ಅರಣ್ಯಾಧಿಕಾರಿ ನಾಗೇಂದ್ರಪ್ರಸಾದ್, ರವಿ ಬುರ್ಜಿ, ಪ್ರಾಂಶುಪಾಲ ಪಿ.ಕೆ. ವೆಂಕಟಸ್ವಾಮಿ ಇದ್ದರು.

ಪುರಸಭೆ ವತಿಯಿಂದ ಸಾರ್ವಜನಿಕ ರುದ್ರಭೂಮಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ದೀಪ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನ ಆಚರಿಸಿದರು. ಪರಿಸರ ಅಭಿಯಂತರ ನಾಗೇಂದ್ರ ಗಾಂವಕರ್, ಆರೋಗ್ಯ ನಿರೀಕ್ಷಕ ಪ್ರಕಾಶ್, ರೋಟರಿ ಶಾಲೆ ಎನ್‌ಸಿಸಿ ಕೆಡೆಟ್ಸ್ ಹಾಗೂ ಪೌರಕಾರ್ಮಿಕರಿದ್ದರು.
ತಾಲೂಕಿನ ರಾಗಿಬೊಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಕ್ಕಳಿಂದ ಸಸಿಗಳನ್ನು ನೆಡಿಸುವ ಮೂಲಕ ಪರಿಸರ ಪಾಲನೆಯ ಬಗ್ಗೆ ಅರಿವು ಮೂಡಿಸಲಾಯಿತು. ಮುಖ್ಯಶಿಕ್ಷಕಿ ಪ್ರವಿತ್ರಮ್ಮ, ಸಹ ಶಿಕ್ಷಕ ನಾಗರಾಜು, ಸಾಮುವೆಲ್, ಪುರುಷೋತ್ತಮ್ ಇದ್ದರು.
ತಾಲೂಕಿನ 39 ಗ್ರಾಮ ಪಂಚಾಯಿತಿ ವತಿಯಿಂದ ಆಯಾ ಪಂಚಾಯಿತಿ ವ್ಯಾಪ್ತಿಯ ಶಾಲೆಗಳು, ಕೆರೆ, ಕಟ್ಟೆ ಸೇರಿದಂತೆ ಸರ್ಕಾರಿ ಜಾಗಗಳಲ್ಲಿ ಗಿಡ ನೆಟ್ಟು ಪರಿಸರ ದಿನವನ್ನು ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net