

ಬೆಳ್ತಂಗಡಿ: ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ರಾಷ್ಟ್ರೀಯ ಮತದಾರರ ದಿನ ಆಚರಣೆ ನಡೆಯಿತು.
ಕಾಲೇಜಿನ ಉಪಪ್ರಾಂಶುಪಾಲೆ, ಆಡಳಿತಾಂಗ ಕುಲಸಚಿವೆ ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶಲೀಪ್ ಎ.ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಮತದಾನದ ಪ್ರಾಮುಖ್ಯ ಏನೆಂದು ಅರಿತುಕೊಳ್ಳಬೇಕಾಗಿದೆ. ಯಾವುದೇ ಚುನಾವಣೆ ನಡೆದರೂ ಮತದಾರರು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಭಾರತವು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ. ಇಲ್ಲಿಯವರೆಗೆ ಸುಮಾರು 99.1 ಕೋಟಿ ಜನರು ಮತದಾರರ ಪಟ್ಟಿಯಲ್ಲಿ ಅಧಿಕೃತವಾಗಿ ದಾಖಲಾಗಿದ್ದಾರೆ. ಮತದಾನದ ಮಹತ್ವದ ಬಗ್ಗೆ ಪ್ರಚಾರ, ಮತದಾರರ ಗುರುತಿನ ಚೀಟಿ ವಿತರಣೆ, ಪ್ರತಿಜ್ಞಾ ವಿಧಿ ಸ್ವೀಕಾರ ಹೀಗೆ ಅನೇಕ ಕಾರ್ಯಕ್ರಮಗಳು ದೇಶದೆಲ್ಲೆಡೆ ನಡೆಯುತ್ತವೆ ಎಂದರು.
ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ನಟರಾಜ್ ಎಚ್.ಕೆ. ಪ್ರತಿಜ್ಞಾವಿಧಿ ನೆರವೇರಿಸಿದರು. ಉಪನ್ಯಾಸಕರಾದ ಭಾಗ್ಯಶ್ರೀ, ಕಿರಣ್ ಜೈನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಮಾನಸಾ ಸ್ವಾಗತಿಸಿದರು. ಹರ್ಷಿತಾ ಎಂ.ಕೆ. ಕಾರ್ಯಕ್ರಮ ನಿರೂಪಿಸಿದರು. ಸುಪ್ರಿತಾ ವಂದಿಸಿದರು.