ಚನ್ನಪಟ್ಟಣ : ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಕನ್ನಡಜ್ಯೋತಿ ರಥಯಾತ್ರೆ ಶುಕ್ರವಾರ ಬೊಂಬೆನಾಡು ಪ್ರವೇಶಿಸಿತು.
ಕನಕಪುರ ಮಾರ್ಗವಾಗಿ ತಾಲೂಕಿಗೆ ಬಂದ ಕನ್ನಡ ಜ್ಯೋತಿ ರಥವನ್ನು ತಾಲೂಕಿನ ಹನಿಯೂರು ಹಾಗೂ ರಾಮೇಗೌಡನದೊಡ್ಡಿ ಗ್ರಾಮದ ಬಳಿ ತಾಲೂಕು ಆಡಳಿತ ಹಾಗೂ ವಿವಿಧ ಸಂಘಸಂಸ್ಥೆಗಳು ಬರಮಾಡಿಕೊಂಡವು.
ತಹಸೀಲ್ದಾರ್ ನರಸಿಂಹಮೂರ್ತಿ ಮಾತನಾಡಿ, ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ಸರ್ಕಾರ ಈ ರಥಯಾತ್ರೆಯನ್ನು ಹಮ್ಮಿಕೊಂಡಿದೆ. ರಾಜ್ಯವನ್ನು ಮೈಸೂರಿನಿಂದ ಕರ್ನಾಟಕ ಎಂದು ಮರು ನಾಮಕರಣ ಮಾಡಿದ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಸಂಭ್ರಮ-50 ಆಚರಿಸುತ್ತಿದೆ. ಕನ್ನಡ ನಾಡು ಸಂಸ್ಕೃತಿ ಹಾಗೂ ವೈವಿಧ್ಯತೆ ಕುರಿತು ಜಾಗೃತಿ ಮೂಡಿಸುವಲ್ಲಿ ಈ ರಥಯಾತ್ರೆ ಪ್ರಮುಖ ಪಾತ್ರ ವಹಿಸಿದೆ. ಕನ್ನಡಿಗರಾದ ನಾವೆಲ್ಲರೂ ಒಂದೇ ಎಂಬ ಸೌಹಾರ್ಧ ಸಂದೇಶ ಸಾರುವ ಈ ರಥ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಕರ್ನಾಟಕದ ಎಲ್ಲರ ಮನೆ ಮನ ಬೆಳಗಲಿ ಎಂದು ಶುಭಕೋರಿದರು.
ಕನಕಪುರದಿಂದ ತಾಲೂಕಿಗೆ ಆಗಮಿಸಿದ ರಥ ಸಾತನೂರು ರಸ್ತೆಯಲ್ಲಿ ಸಂಚರಿಸಿ ಚನ್ನಪಟ್ಟಣ ನಗರ ತಲುಪಿತು. ಮಾರ್ಗ ಮಧ್ಯೆ ಸಿಂಗರಾಜಿಪುರ, ಬಿ.ವಿ.ಹಳ್ಳಿ, ಹೊಂಗನೂರು ಗ್ರಾಪಂನಿಂದ ರಥಯಾತ್ರೆಯನ್ನು ಸ್ವಾಗತಿಸಲಾಯಿತು.
ಕ್ಷೇತ್ರ ಸಮನ್ವಯಧಿಕಾರಿ ಸಿ. ರಾಜಶೇಖರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಬ್ರಹ್ಮಣೀಪುರ ರಾಮಕೃಷ್ಣಯ್ಯ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಈ ರಥಯಾತ್ರೆ ಶನಿವಾರ ಬೆಳಗ್ಗೆ 9.30 ಗಂಟೆಗೆ ತಾಲೂಕಿನ ಕೆಂಗಲ್ ದೇವಸ್ಥಾನ ಆವರಣದಿಂದ ಹೊರಟು, ಚನ್ನಪಟ್ಟಣದ ಶೇರುವ ಹೊಟೇಲ್ ಮೂಲಕ ಬೆಂಗಳೂರು-ಮೈಸೂರು ಮುಖ್ಯರಸ್ತೆಯಲ್ಲಿ ಮೆರವಣಿಗೆಯ ಮೂಲಕ ಸಾಗಲಿದೆ.