

ಚಿಕ್ಕಬಳ್ಳಾಪುರ: ಸ್ತ್ರೀ ಸಬಲೀಕರಣ, ಸ್ವಾವಲಂಬಿ ಜಾಗೃತಿ ಕಾರ್ಯಕ್ರಮಗಳ ನಡುವೆಯೂ ಜಿಲ್ಲೆಯಲ್ಲಿ ಮಹಿಳಾ ದೌರ್ಜನ್ಯ, ಕಿರುಕುಳ ಪ್ರಕರಣಗಳು ದಾಖಲಾಗುತ್ತಿವೆ.
ಜಿಲ್ಲೆಯಲ್ಲಿ ಕೌಟುಂಬಿಕ ಹಿಂಸೆಗೆ ಸಂಬಂಧಿಸಿದಂತೆ 38 ಪ್ರಕರಣಗಳು, ಬಹುಪತ್ನಿತ್ವ, ವಿಚ್ಛೇದನ ಸೇರಿ ಮಹಿಳೆಯರ ಮೇಲಿನ ದೌರ್ಜನ್ಯದ 1354 ಪ್ರಕರಣಗಳು (ಪ್ರಸಕ್ತ ಸಾಲಿನ ಏಪ್ರಿಲ್ನಿಂದ ನವೆಂಬರ್‌ವರೆಗೆ) ವರದಿಯಾಗಿವೆ. ಹಾಗೆಯೇ 1327 ಪ್ರಕರಣಗಳು ಇತ್ಯರ್ಥವಾಗಿವೆ ಎಂಬುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಹಿತಿ ನೀಡಿದೆ.
ಪ್ರಬಲ ಕಾನೂನು ಕಾಯ್ದೆಗಳ ಜಾರಿ, ವ್ಯಾಪಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಮಹಿಳೆಯರಿಗೆ ರಕ್ಷಣೆ ನೀಡಲಾಗುತ್ತಿದೆ. ಆದರೂ, ವರದಕ್ಷಿಣೆ, ಅತ್ಯಾಚಾರ, ಲೈಂಗಿಕ ಕಿರುಕುಳ, ದೌರ್ಜನ್ಯ ಹೀಗೆ ವಿವಿಧ ರೀತಿಯಲ್ಲಿ ಮಹಿಳೆಯರನ್ನು ದೈಹಿಕ ಮತ್ತು ಮಾನಸಿಕವಾಗಿ ಹಿಂಸಿಸಲಾಗುತ್ತಿದೆ. ಇದರ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗುತ್ತಿವೆ.
ಬಹುತೇಕ ಪ್ರಕರಣಗಳು ಇತ್ಯರ್ಥಗೊಂಡರೂ ಶೋಷಣೆ ಯಾಗಿರುವುದನ್ನು ಖಚಿತಪಡಿಸುತ್ತಿವೆ. ಕೆಲವೇ ಕೆಲವು ಪ್ರಕರಣಗಳಲ್ಲಿ ಸುಳ್ಳು ದೂರು ದಾಖಲಾಗುತ್ತಿರುವುದು ತಿಳಿಯುತ್ತಿದೆ.
ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೆ ಒಂದರಂತೆ 6 ಸ್ವಾಂತನ ಕೇಂದ್ರಗಳಿವೆ. ಇಲ್ಲಿ ಸಂತ್ರಸ್ತೆಯರ ಕೌನ್ಸೆಲಿಂಗ್, ಆಶ್ರಯ, ಕಾನೂನು ಸಲಹೆ ಮಾರ್ಗದರ್ಶನ ನೀಡುವ ಕೆಲಸವಾಗುತ್ತಿದೆ. ಮತ್ತೊಂದೆಡೆ ಮಹಿಳಾ ಪೊಲೀಸ್ ಠಾಣೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನ್ಯಾಯಾಲಯಗಳ ಮೂಲಕ ಶೀಘ್ರ ಪರಿಹಾರ, ರಕ್ಷಣೆ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸಲು ಶ್ರಮಿಸುತ್ತಿದೆ.