

ಬೇಲೂರು; ಸರ್ಕಾರಿ ಶಾಲಾ ವಿದ್ಯಾರ್ಥಿಗಳು, ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಾಲು, ಬ್ರೆಡ್ ವಿತರಿಸುವ ಮೂಲಕ ತಾಲೂಕು ಮಾನವ ಬಂಧುತ್ವ ವೇದಿಕೆಯಿಂದ ಬಸವ ಪಂಚಮಿ ಆಚರಿಸಿ, ಜನರಲ್ಲಿ ನಾಗರ ಪಂಚಮಿಯ ಮೂಲದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಶಿವರಾಜ್ ಹೇಳಿದರು.
ಪಟ್ಟಣದ ಕೆಂಪೇಗೌಡ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರೌಢಶಾಲೆಯಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಬುಧವಾರ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರು ಭಕ್ತಿಯ ಮೌಢ್ಯಕ್ಕೆ ಒಳಗಾಗಿ ಪೌಷ್ಟಿಕ ಆಹಾರ ಹಾಲನ್ನು ನಾಗರ ಪಂಚಮಿ ಹೆಸರಲ್ಲಿ ವ್ಯರ್ಥ ಮಾಡುತ್ತಿರುವುದು ನಾಗರಿಕರ ಲಕ್ಷಣವಲ್ಲ. ಮನುಷ್ಯ ತನ್ನ ಬುದ್ಧಿವಂತಿಕೆ ಮತ್ತು ವಿವೇಚನಾ ಶಕ್ತಿ ಅರಿತು ಮೂಢನಂಬಿಕೆ ಹಾಗೂ ಮೌಢ್ಯಗಳಿಂದ ಹೊರ ಬರಬೇಕು ಎಂದರು.
ಇಂದಿಗೂ ದೇಶದ ಅಸಂಖ್ಯಾತ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹಸಿವಿನಿಂದ ಬಳಲುತ್ತಿರುವವರಿದ್ದಾರೆ. ಆದರೆ, ವಿದ್ಯಾವಂತರೆ ಹೆಚ್ಚಾಗಿ ಮೌಢ್ಯಕ್ಕೆ ಬಲಿಯಾಗುತ್ತಿದ್ದಾರೆ. ನಾಗರ ಪಂಚಮಿಯಂದು ನಾಗರ ಕಲ್ಲು ಮತ್ತು ಹುತ್ತಗಳಿಗೆ ಹಾಲೆರೆದು ವ್ಯರ್ಥ ಮಾಡುವುದಕ್ಕಿಂತ ಅದೇ ಹಾಲನ್ನು ಅನಾಥಾಶ್ರಮ ಅಥವ ಬಡ ವಿದ್ಯಾರ್ಥಿಗಳ ವಸತಿ ಶಾಲೆ ಮಕ್ಕಳಿಗೆ ವಿತರಿಸಿದರೆ ಒಳಿತು. ಅಲ್ಲದೆ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸುತ್ತಿರುವ ದಸಂಸ(ಅಂಬೇಡ್ಕರ್ ವಾದ) ಕಾರ್ಯ ಶ್ಲಾಘನೀಯ ಎಂದರು.
ಮಾನವ ಬಂಧುತ್ವ ವೇದಿಕೆ ಮಂಗಳೂರು ವಿಭಾಗಿಯ ಸಂಚಾಲಕ ಸತೀಶ್ ಕುಮಾರ್ ಮಾತನಾಡಿ, ನಾಗರ ಪಂಚಮಿಯನ್ನು ಮೊದಲು ಬಸವ ಪಂಚಮಿಯನ್ನಾಗಿ ಆಚರಿಸಲಾಗುತಿತ್ತು. ಆದರೆ, ಅದನ್ನು ಮರೆಮಾಚುವ ಉದ್ದೇಶದಿಂದ ಕೆಲವರು ನಾಗರ ಪಂಚಮಿಯನ್ನಾಗಿ ಆಚರಿಸಿ ಜನರಲ್ಲಿ ಮೌಢ್ಯವನ್ನು ಬಿತ್ತುತ್ತಿದ್ದಾರೆ. ಆದರೆ, ಹಾವು ಹಾಲನ್ನು ಕುಡಿಯುವುದಿಲ್ಲ ಎಂಬುದು ವೈಜ್ಞಾನಿಕವಾಗಿ ಸಾಬಿತಾಗಿದೆ. ಆದರೂ ಜನರು ಹುತ್ತಕ್ಕೆ ಹಾಲು ಹಾಕುವುದನ್ನು ಬಿಟ್ಟಿಲ್ಲ. ಪ್ರಪಂಚದ ಎಲ್ಲ ದೇಶದಲ್ಲೂ ದೇವರ ಹೆಸರಿನಲ್ಲಿ ಮೌಢ್ಯ ಇದೆ. ಆದರೆ, ನಮ್ಮ ದೇಶದಲ್ಲಿ ಇದು ಹೆಚ್ಚಾಗಿದೆ ಎಂದರು.
ಸರ್ಕಾರಿ ಮಹಿಳಾ ಪ್ರೌಢಶಾಲೆ ಮುಖ್ಯಶಿಕ್ಷಕ ಚಂದ್ರಶೇಖರ್, ದಸಂಸ(ಅಂಬೇಡ್ಕರ್‌ವಾದ)ವಿಭಾಗೀಯ ಸಂಚಾಲಕ ಲಕ್ಷ್ಮಣ್, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ರಂಗಸ್ವಾಮಿ, ಸಂಪನ್ಮೂಲ ವ್ಯಕ್ತಿ ಸೌಭಾಗ್ಯ ಆಂತೋಣಿ ಸ್ವಾಮಿ, ವಿದ್ಯಾರ್ಥಿ ವೇದಿಕೆ ಜಿಲ್ಲಾ ಸಂಚಾಲಕ ಲಿಖಿತ್ ರಾವಣ, ತಾಲೂಕು ಸಂಚಾಲಕ ರಂಜನ್, ರಮೇಶ್ ಬಕ್ರವಳ್ಳಿ, ಗಂಗಾಧರ್ ಇತರರಿದ್ದರು.