ನೀರು ಬಳಕೆ ಕುರಿತು ಅರಿವು ಅಗತ್ಯ

11-kkr-2(9-25
ಕಿಕ್ಕೇರಿ ನೀರು ಬಳಕೆದಾರರ ಸಹಕಾರ ಸಂಘದಲ್ಲಿ ರೈತರ ಸಮಸ್ಯೆ ಕುರಿತು ಬುಧವಾರ ಸಭೆ ನಡೆಯಿತು. ಕೆ.ಟಿ. ರಮೇಶ್, ಕೃಷ್ಣಯ್ಯ, ಕೆ.ಪಿ. ಉಮೇಶ್, ಲಕ್ಷ್ಮೀಕಾಂತ್, ಪುಟ್ಟಸ್ವಾಮಿಗೌಡ, ಎಸ್. ರಮೇಶ್, ರಘು, ಸಿ.ಕೆ. ರಾಜೇಗೌಡ ಮತ್ತಿತರರಿದ್ದರು.
Published on

ಕಿಕ್ಕೇರಿ: ನೀರಿಗಾಗಿ ಮಹಾಯುದ್ಧ ಸಂಭವಿಸುವ ಮುನ್ನ ಜಾಗೃತರಾಗಿ ನೀರು ಬಳಕೆಯ ಅರಿವು ಮೂಡಿಸಿಕೊಳ್ಳಲು ಎಲ್ಲರೂ ಮುಂದಾಗಬೇಕು ಎಂದು ಕಿಕ್ಕೇರಿ ನೀರು ಬಳಕೆದಾರ ಸಹಕಾರ ಸಂಘದ ನೂತನ ಅಧ್ಯಕ್ಷ ಕೆ.ಟಿ. ರಮೇಶ್ ತಿಳಿಸಿದರು.

ಇಲ್ಲಿನ ಕಿಕ್ಕೇರಿ ನೀರು ಬಳಕೆದಾರರ ಸಹಕಾರ ಸಂಘದ ಕಟ್ಟಡದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, 2001ರಲ್ಲಿ ಆರಂಭವಾದ ಸಂಘ ಹಲವು ಕಾರಣಗಳಿಂದ ಸ್ಥಗಿತವಾಗಿತ್ತು. ಈಗ ಸಂಘಕ್ಕೆ ಮರುಜೀವ ನೀಡಲಾಗಿದೆ. ನೂತನ ಸದಸ್ಯರು ಸಂಘದಲ್ಲಿ ಸಕ್ರಿಯವಾಗಿರುವುದು ಸಂಘ, ರೈತರ ಸಮಸ್ಯೆಗಳ ಪರಿಹಾರಕ್ಕೆ ಅನುಕೂಲವಾಗಲಿದೆ ಎಂದರು.

ಆರಂಭದಲ್ಲಿ ಉತ್ತಮವಾಗಿ ಹಿರಿಯರು ಕಾರ್ಯ ನಿರ್ವಹಿಸಿ ತಾಲೂಕಿನಲ್ಲಿ ಉತ್ತಮ ಸಂಘವಾಗಿತ್ತು. ಹಿರಿಯರ ಅಕಾಲಿಕ ಮರಣದಿಂದ ಸಂಘ ನಿಷ್ಕ್ರಿಯವಾಗಿತ್ತು. ಈಗ ಸಂಘಕ್ಕೆ ಮರುಜೀವ ಲಭಿಸಿದೆ. ನಿರ್ದೇಶಕರು ರೈತರ ಸಮಗ್ರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗಿದ್ದಾರೆ. ಹೊಸ ಆಲೋಚನೆಗಳನ್ನು ಹಮ್ಮಿಕೊಂಡು ರೈತರ ಕೃಷಿ ಚಟುವಟಿಕೆಗೆ ಇರುವ ಸಮಸ್ಯೆಗಳನ್ನು ಮೊದಲು ಪಟ್ಟಿಮಾಡಿಕೊಂಡು ಹಂತ ಹಂತವಾಗಿ ಸಮಸ್ಯೆ ಪರಿಹಾರಕ್ಕೆ ಮುಂದಾಗುವೆ ಎಂದು ನುಡಿದರು.

ಹೇಮಾವತಿ ವಲಯದ ನೌಕರರ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಸರ್ಕಾರದಿಂದ ಇಂತಹ ಸಂಘಗಳಿಗೆ ವಿಶೇಷವಾಗಿ ಅನುದಾನ, ಸೌಲಭ್ಯಗಳಿವೆ. ಇವುಗಳನ್ನು ಪಡೆದುಕೊಂಡು ರೈತರ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು. ಕೆರೆಯಲ್ಲಿನ ಹೂಳು, ಏರಿ ಮೇಲೆ ಬೆಳೆದಿರುವ ಗಿಡಗಂಟಿ, ಜಂಗಲ್, ರೈತರು ಓಡಾಡಲು, ಕೃಷಿ ಪರಿಕರಗಳನ್ನು ಸಾಗಿಸಲು ಬಂಡಿ ರಸ್ತೆಗೆ ಮೊದಲು ಒತ್ತು ನೀಡಬೇಕು ಎಂದು ಮಾಹಿತಿ ನೀಡಿದರು.

ನೂತನ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಗಂಗೇನಹಳ್ಳಿ ಕೃಷ್ಣಯ್ಯ, ನಿರ್ದೇಶಕರಾಗಿ ಕೆ.ಪಿ. ಉಮೇಶ್, ಲಕ್ಷ್ಮೀಕಾಂತ್, ಪುಟ್ಟಸ್ವಾಮಿಗೌಡ, ಎಸ್. ರಮೇಶ್, ರಘು, ಸಿ.ಕೆ. ರಾಜೇಗೌಡ, ಮಂಜೇಗೌಡ, ಮಂಜುನಾಥ, ರಾಜಮ್ಮ, ಪ್ರೇಮ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net