

ಶ್ರೀರಂಗಪಟ್ಟಣ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಶ್ರೀರಂಗಪಟ್ಟಣ ದಸರಾ ಪ್ರಯುಕ್ತ ಹಮ್ಮಿಕೊಂಡಿದ್ದ ಮ್ಯಾರಥಾನ್ ಸ್ಪರ್ಧೆಗೆ ಪಾಂಡವಪುರ ಉಪವಿಭಾಗಾಧಿಕಾರಿ ಎ.ಎಂ.ನಂದೀಶ್ ಚಾಲನೆ ನೀಡಿದರು.
ಮ್ಯಾರಥಾನ್‌ನಲ್ಲಿ 29 ವರ್ಷ ಒಳಗಿನವರು, 29 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರು 4 ವಿಭಾಗಗಳಲ್ಲಿ ಸುಮಾರು 250 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಒಟ್ಟು 5 ಕಿ.ಮೀ ( ತಾಲೂಕು ಕ್ರೀಡಾಂಗಣದಿಂದ ಗಂಜಾಂ ಪ್ರವೇಶಿಸಿ ನಿಮಿಷಾಂಭ ದೇವಸ್ಥಾನ ಮಾರ್ಗದ ಮೂಲಕ ಕರಿಘಟ್ಟದ ಪಾದದವರೆಗೆ) ನಿಗದಿ ಮಾಡಲಾಗಿತ್ತು.
ವಿಜೇತರ ವಿವರ: 29 ವರ್ಷದೊಳಗಿನ ಪುರುಷರ ವಿಭಾಗದಲ್ಲಿ ಮಣಿಕಂಠ, ಭರತ್ ದ್ಯಾವಪ್ಪ, ದೊರೆ ಎಚ್.ಡಿ, ಮಹಿಳೆಯರ ವಿಭಾಗದಲ್ಲಿ ಜಯಶ್ರೀ.ಎಸ್, ವೈಷ್ಣವಿ, ಯಶಸ್ವಿನಿ.ಎಸ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದುಕೊಂಡರು.
30 ವರ್ಷದ ಮೇಲ್ಪಟ್ಟ ಪುರುಷರ ವಿಭಾಗ: ಮಂಜುನಾಥ ಎಂ.ಎ., ಉದಯ ಬಿಲ್ವ, ಶಿವಲಿಂಗ ದಳವಾಯಿ, ಮಹಿಳೆಯರ ವಿಭಾಗದಲ್ಲಿ ವಿಜಯಾ ಎಸ್.ಜಿ, ಶೋಭಾ ಎನ್.ಆರ್., ಶ್ರುತಿ ಎನ್. ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದರು.
ವಿಜೇತರಿಗೆ ಪ್ರಥಮ ಬಹುಮಾನ 3 ಸಾವಿರ ರೂ., ದ್ವಿತೀಯ 2 ಸಾವಿರ ರೂ.ಹಾಗೂ ತೃತೀಯ ಬಹುಮಾನ 1 ಸಾವಿರ ರೂ. ನಗದು ಬಹುಮಾನ ಟ್ರೋಫಿ, ಪ್ರಮಾಣ ಪತ್ರ ನೀಡಲಾಯಿತು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮೀ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲಾ, ಅಚೀವರ್ಸ್ ಅಕಾಡೆಮಿ ಮುಖ್ಯಸ್ಥ ಡಾ.ರಾಘವೇಂದ್ರ , ಓಂ ಶ್ರೀನಿಕೇತನ ಟ್ರಸ್ಟ್ ಮುಖ್ಯಸ್ಥ ಮಂಜುರಾಮ್, ರಂಗನಾಯಕಿ ಸ್ತ್ರೀ ಸಮಾಜದ ಮುಖ್ಯಸ್ಥೆ ಆಶಾಲತಾ ಪುಟ್ಟೇಗೌಡ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಉಪಸ್ಥಿತರಿದ್ದರು.