

ಕಡಬ: ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಎಸ್.ಬಾಜಾಲಿ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಡಬ ತಾಲೂಕಿನ ಕುದ್ಮಾರು ಗ್ರಾಮದ ಕಾಪೆಜಾಲು ನಿವಾಸಿ ಡೊಂಬಯ್ಯ ನಲಿಕೆ ಆಯ್ಕೆಯಾಗಿದ್ದಾರೆ. ಅ.26ರಂದು ಬೆಂಗಳೂರಿನ ಪ್ರಶಸ್ತಿ ಪ್ರದಾನ ನಡೆಯಲಿದೆ.
ರಾಜ್ಯದ 20 ಜನರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಸಂಘಟಕ, ಕಾರ್ಯಕ್ರಮ ಅಧಿಕಾರಿ ಆಗಿದ್ದ ದಿ.ಟಿ.ಕೆ.ಗೌಡ ಸ್ಥಾಪಿಸಿದ ದತ್ತಿಯಿಂದ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ 5 ಸಾವಿರ ರೂ. ನಗದು ಪುರಸ್ಕಾರದ ಜತೆಗೆ ರಾಜ್ಯಮಟ್ಟದ ಗೌರವ ಒಳಗೊಂಡಿದೆ.
ಡೊಂಬಯ್ಯ ನಲಿಕೆ ದಿ.ಐತ್ತ ಅಜಿಲ ಮತ್ತು ದಿ.ದುಗ್ಗಮ್ಮ ದಂಪತಿಯ ಏಳು ಮಕ್ಕಳಲ್ಲಿ ಕೊನೆಯ ಮಗ. ಕೊಪ್ಪ ಸರ್ಕಾರಿ ಶಾಲೆ ಮತ್ತು ಕುದ್ಮಾರು ಸರ್ಕಾರಿ ಶಾಲೆಯಲ್ಲಿ 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದು, ಬಳಿಕ ತನ್ನ ತಂದೆಯ ಒತ್ತಾಸೆಯಂತೆ 16ನೇ ವಯಸ್ಸಿನಲ್ಲಿ ದೈವಾರಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.