ಗೌರವ ಕಳೆದುಕೊಂಡ ಪ್ರಶಸ್ತಿ

9
ಕುದೂರು ಹೋಬಳಿಯ ಮಾದಿಗೊಂಡನಹಳ್ಳಿಯ ಶ್ರೀ ಗುಡ್ಡದ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಹಮ್ಮಿಕೊಂಡಿದ್ದ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಡಾ. ಎಂ.ಜಿ. ಮಂಜುನಾಥ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಶಾಸಕ ಎಚ್.ಸಿ.ಬಾಲಕೃಷ್ಣ, ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ, ಕಸಾಪ ತಾಲೂಕು ಹಾಗೂ ಜಿಲ್ಲಾಧ್ಯಕ್ಷರು ಮತ್ತಿತರರು ಇದ್ದರು.
Published on

ಮಾಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಡಾ.ಎಂ.ಜಿ.ಮಂಜುನಾಥ್ ಬೇಸರ

ಕುದೂರು: ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿ, ಗೌರವ ಹಾಗೂ ಸನ್ಮಾನಗಳು ಕಾಡಿ-ಬೇಡಿ, ಲಾಬಿ ಮಾಡಿ ಪಡೆದುಕೊಳ್ಳುವ ಮಟ್ಟಕ್ಕೆ ಇಳಿದಿರುವುದು ಶೋಚನೀಯ ಎಂದು ಸಮ್ಮೇಳನಾಧ್ಯಕ್ಷ ಡಾ.ಎಂ.ಜಿ.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಮಾಗಡಿ ತಾಲೂಕು ಕುದೂರು ಹೋಬಳಿ ಗಡಿ ಭಾಗದ ಗುಡ್ಡದ ರಂಗನಾಥಸ್ವಾಮಿ ಬೆಟ್ಟದಲ್ಲಿ ಗುರುವಾರ ಹಮ್ಮಿಕೊಂಡಿದ್ದ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

ಕಲ್ಲುಬಂಡೆಗಳು, ಸಣ್ಣಪುಟ್ಟ ಗುಡ್ಡಗಳಿಂದ ಮಾಗಡಿ ತಾಲೂಕು, ಸಾಂಸ್ಕೃತಿಕ ಪರಂಪರೆ ಹಿರಿದಾದದ್ದೂ, ಮಹತ್ವದ್ದೂ ಆಗಿದೆ. ಮಾಗಡಿಯ ಇತಿಹಾಸ ಉತ್ತುಂಗಕ್ಕೆ ಏರಿದ್ದು, ಯಲಹಂಕ ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ಬಿಜಾಪುರದ ರಣದುಲ್ಲಾ ಖಾನನ ದಾಳಿಯ ಪರಿಣಾಮವಾಗಿ ಬೆಂಗಳೂರನ್ನು ತೊರೆದು ಮಾಗಡಿಯನ್ನು ರಾಜಧಾನಿ ಮಾಡಿಕೊಂಡು ರಾಜ್ಯಭಾರ ಮಾಡುತ್ತಿದ್ದರು. ಸುಮಾರು 500 ವರ್ಷಗಳ ಹಿಂದೆಯೇ ಕೆಂಪೇಗೌಡರು ಮಳೆಕೊಯ್ಲು ತಂತ್ರಜ್ಞಾನವನ್ನು ಪ್ರಥಮ ಬಾರಿ ಬಳಸಿ ಮಳೆ ನೀರನ್ನು ಸದುಪಯೋಗ ಪಡಿಸಿಕೊಳ್ಳುವ ಕೆಲಸ ಮಾಡಿದರು. ಇದು ನಮ್ಮ ಮಾಗಡಿಯ ಕೊಡುಗೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಯಾವುದೇ ಭಾಷೆಯನ್ನು ದ್ವೇಷ ಮಾಡಬಾರದು. ದಾಸ ಸಾಹಿತ್ಯ ಲೋಕದಲ್ಲೇ ದೊಡ್ಡ ಕೊಡುಗೆ ನೀಡಿದ್ದು, ಸಾಹಿತಿಗಳಿಗೆ ಗೌರವ ಕೊಡುವ ಕೆಲಸವಾಗಬೇಕು ಎಂದರು. ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಎಲ್ಲ ರಂಗದಲ್ಲೂ ತಾಲೂಕು ದೊಡ್ಡ ಹೆಸರು ಗಳಿಸಿದೆ. ಮುಂದಿನ ಸಾಹಿತ್ಯ ಸಮ್ಮೇಳನ ವೇಳೆಗೆ ಮಾಗಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ಸ್ಥಾಪಿಸಲು ಜಾಗ ನೀಡಲಾಗಿದ್ದು, ಪತ್ರಕರ್ತರ ಭವನಕ್ಕೂ ಜಾಗ ನೀಡಲಾಗಿದೆ ಎಂದರು.

ಕಂಚುಗಲ್ ಬಂಡೇಮಠಾಧ್ಯಕ್ಷ ಶ್ರೀ ಮಹಾಲಿಂಗ ಸ್ವಾಮೀಜಿ ಮಾತನಾಡಿ, ಪರಭಾಷಿಕರಿಗೆ ನಮ್ಮ ಭಾಷೆಯಲ್ಲೇ ಮಾತನಾಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಎಲ್ಲ ಸರ್ಕಾರಿ ನೌಕರರ ಮಕ್ಕಳು, ಶಿಕ್ಷಕರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಓದಬೇಕು ಎಂಬ ಕಾನೂನು ತಂದರೆ ಕನ್ನಡ ಶಾಲೆಗಳು ಉಳಿಯುತ್ತದೆ ಎಂದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಪುತ್ರ ಉಮೇಶ್ ಮಾತನಾಡಿ, ತಿಮ್ಮಕ್ಕ ಬೆಳೆಸಿರುವ ಸಾಲುಮರಗಳನ್ನು ಉಳಿಸುವ ಜತೆಗೆ ಅವರು ವಾಸವಿದ್ದ ಹುಲಿಕಲ್ನಲ್ಲಿರುವ ಮನೆ ಅಭಿವೃದ್ಧಿ ಪಡಿಸಬೇಕು ಎಂದರು. ಸಾಲುಮರದ ತಿಮ್ಮಕ್ಕ ಅವರನ್ನು ಸನ್ಮಾನಿಸಲಾಯಿತು. ಜ್ಞಾನಪೀಠ ಪ್ರಶಸ್ತಿ ಪ್ರಶಸ್ತಿ ಪಡೆದ ಕವಿಗಳ ವೇಷ ಭೂಷಣ ಹಾಗೂ ವಿವಿಧ ಕನ್ನಡ ಹೋರಾಟಗಾರರ ಶಾಲಾ ಮಕ್ಕಳ ವೇಷ ಭೂಷಣ ಆಕರ್ಷಣೀಯವಾಗಿತ್ತು. ಡಾ. ಚೇತನ್ ಕುಮಾರ್, ಎಚ್.ಆರ್. ಮಂಜುನಾಥ್, ಕರಾಟೆ ರಮೇಶ್, ವಿದ್ಯಾರ್ಥಿ ಮಿತ್ರ ಕಿರಣ್, ಕಣ್ಣೂರು ರಾಜಣ್ಣ, ಬೆಟ್ಟಸ್ವಾಮಿ, ಮಾದೇಶ್, ಶಿವಪ್ರಸಾದ್, ಶಿವಣ್ಣ, ಸಿದ್ದಲಿಂಗೇಶ್ವರ್, ಉಮಾಶಂಕರ್, ನರಸಿಂಹಮೂರ್ತಿ ಮತ್ತು ಶ್ರೀದೇವಿ ಕುದೂರಮ್ಮ ಚಂಡೇ ಮಹಿಳಾ ಸಂಘ ಸೇರಿ 30 ಮಂದಿಗೆ ಕೆಂಪೇಗೌಡ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್, ತಾಲೂಕು ಅಧ್ಯಕ್ಷ ತಿ.ನಾ ಪದ್ಮನಾಭ, ನಿಕಟಪೂರ್ವ ಸಮ್ಮೇಳನ ಅಧ್ಯಕ್ಷರಾದ ನಂಜುಂಡಯ್ಯ, ಕಲ್ಪನಾ ಶಿವಣ್ಣ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ಅಶೋಕ್, ಜಿಲ್ಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜೇಗೌಡ, ಬಿಇಒ ಚಂದ್ರಶೇಖರ್, ತಾಪಂ ಇಒ ಜೈಪಾಲ್, ಗುಡ್ಡದ ರಂಗನಾಥ ಸ್ವಾಮಿ ಟ್ರಸ್ಟ್ ಅಧ್ಯಕ್ಷ ದೇವರಾಜು, ದೇವಸ್ಥಾನದ ಅರ್ಚಕ ರಾಮಸ್ವಾಮಿ, ಶಶಾಂಕ್ ರೇವಣ್ಣ ಪೂಜಾರಿಪಾಳ್ಯ ಕೃಷ್ಣಮೂರ್ತಿ ಶೈಲಜಾ ಪಾನ್ಯಂ ನಟರಾಜ್ ಕಲ್ಕೆರೆ ಶಿವಣ್ಣ ಸಿ.ಜಯರಾಂ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಜಯರಾಂ, ಮಾದಿಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷ ಪದ್ಮ, ಸೋಲೂರು ಗ್ರಾಂಪ ಅಧ್ಯಕ್ಷ ಮುಜಾಯಿತ್ ಪಾಷಾ ಇತರರು ಇದ್ದರು.

ಧ್ವಜಾರೋಹಣ, ಮೆರವಣಿಗೆ

ತಹಸೀಲ್ದಾರ್ ಡಿ.ಪಿ.ಶರತ್ ಕುಮಾರ್ ಬೆಳಗ್ಗೆ 8ಕ್ಕೆ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದರು. ಪರಿಷತ್ತಿನ ಧ್ವಜವನ್ನು ರಾಮನಗರ ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ ನಾಗೇಶ್ ಹಾಗೂ ನಾಡಧ್ವಜವನ್ನು ಮಾಗಡಿ ತಾಲೂಕು ಕಸಾಪ ಅಧ್ಯಕ್ಷ ತಿ.ನಾ.ಪದ್ಮನಾಭ ನೆರವೇರಿಸಿದರು. ನಂತರ ರಾಷ್ಟ್ರೀಯ ಹೆದ್ದಾರಿ 75 ಹತ್ತಿರದ ಅಂಬೇಡ್ಕರ್ ವಸತಿ ಶಾಲೆಯಿಂದ ಗುಡ್ಡದ ರಂಗನ ಬೆಟ್ಟದ ವೇದಿಕೆವರೆಗೂ ಭುವನೇಶ್ವರಿ ದೇವಿ ಮತ್ತು ಸಮ್ಮೇಳನಾಧ್ಯಕ್ಷ ಎಂ.ಜಿ ಮಂಜುನಾಥ್ ಮೆರವಣಿಗೆ ಮಾಡಲಾಯಿತು. ವೇಶಭೂಷಣ ತೊಟ್ಟ ವಿದ್ಯಾರ್ಥಿಗಳು ಹಾಗೂ ಕನ್ನಡ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯ

1. ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಮೂಲವಾಗಿರುವ ಅರ್ಕಾವತಿ ನದಿ ಜಲಮೂಲದ ನೆಲೆ, ರಾಜಕಾಲುವೆ ಒತ್ತುವರಿ ತೆರೆವುಗೊಳಿಸಿ ನದಿಯನ್ನು ಪುನರುಜ್ಜೀವನಗೊಳಿಸಿ

2. ಜಿಂಕೆಗಳು, ಕೃಷ್ಣಮೃಗಗಳ ಕಳ್ಳ ಬೇಟೆಗಾರರಿಂದ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಿ

3. ಅಕ್ಬರ್‌ನಿಂದ ಸನ್ಮಾನಿತನಾದ ಪುಂಡರೀಕ ವಿಠ್ಠಲನ ಹೆಸರು ಶಾಶ್ವತವಾಗಿ ಉಳಿಯುವ ಸ್ಮಾರಕ ಅಥವಾ ಅಧ್ಯಯನ ಪೀಠ ಸ್ಥಾಪಿಸಿ

4. ತಾಲೂಕಿನಾದ್ಯಂತ ದೊರೆಯುವ ಮಾಸ್ತಿಗಲ್ಲು, ವೀರಗಲ್ಲು, ಶಿಲ್ಪಗಳು ಮತ್ತಿತರ ಅಮೂಲ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡಿ

ಕನ್ನಡಿಗರಿಗೂ, ಕರ್ನಾಟಕಕ್ಕೂ, ಕನ್ನಡಾಂಬೆಗೂ ಯಾವುದೇ ರೀತಿ ಸಂಬಂಧವಿಲ್ಲ. ಆದರೂ, ಕನ್ನಡಾಂಬೆಗೆ ಜೈ ಎನ್ನುತ್ತೇವೆ. ಭುವನೇಶ್ವರಿ ತಾಯಿಯ ದೇವಸ್ಥಾನ ಕಟ್ಟಿ ದೇವಿಗೆ ಆರಾಧನೆ ಮಾಡುವ ಕೆಲಸ ಆಗಬೇಕು. ಜೈ ಕರ್ನಾಟಕ ಮಾತೆ ಎನ್ನುವವರು ಮಾತೆಗೆ ಮಂದಿರ ಕಟ್ಟಿಸಿಲ್ಲ. - ಡಾ.ನಾ.ಸೋಮೇಶ್ವರ ರಾವ್ ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net