ಪ್ಲಾಸ್ಟಿಕ್ ಬಿಟ್ಟು ಪರಿಸರ ಸ್ನೇಹಿ ಬಟ್ಟೆ ಬಳಸಿ

06M.D.R.1
Published on

ಮದ್ದೂರು: ಭೂಮಿ ಮೇಲಿರುವ ಪ್ರತಿಜೀವಿಗೂ ಸುಸ್ಥಿರ ಜೀವನ ನಡೆಸಲು ಪರಿಸರ ಅತ್ಯಗತ್ಯ. ಹಾಗಾಗಿ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಆರ್.ಕೆ.ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ರಾಮಕೃಷ್ಣ ಮನವಿ ಮಾಡಿದರು.

ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಆರ್.ಕೆ.ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪರಸರ ದಿನಾಚರಣೆಯಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು, ಹಸಿರನ್ನು ಉಳಿಸುವುದು. ಮಾಲಿನ್ಯ ತಡೆಗಟ್ಟುವುದು, ಅತಿಯಾದ ಪ್ಲಾಸ್ಟಿಕ್ ಬಳಕೆ ಬಿಟ್ಟು ಪರಿಸರ ಸ್ನೇಹಿ ಬಟ್ಟೆಗಳನ್ನು ಬಳಸುವ ಮೂಲಕ ಪರಿಸರ ಮೇಲಾಗುವ ದುಷ್ಪರಿಣಾಮಗಳನ್ನು ತಡೆಗಟ್ಟುವುದು ಪ್ರತಿಯೊಬ್ಬರ ಹೊಣೆ ಎಂದರು.

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಸಿದ್ದರಾಜು ಅವರು ಮಾತನಾಡಿ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಶಪಥ ಮಾಡುವ ಮೂಲಕ ಮರುಬಳಕೆಯ ಬಗ್ಗೆ ಗಮನಹರಿಸುವ ಹಾಗೂ ಪರಿಸರ ಸ್ವಚ್ಛತೆಗೆ ಕೈ ಜೋಡಿಸುವ ಮೂಲಕ ವಿಶ್ವ ಪರಿಸರ ದಿನಕ್ಕೆ ನಾವು ನಮ್ಮದೇ ಆದ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿನಯರಾಮಕೃಷ್ಣ ವಹಿಸಿ ಮಾತನಾಡಿ, ಪರಿಸರ ಎನ್ನುವುದು ನಮ್ಮ ಆಯ್ಕೆ ಅಲ್ಲ ನಮ್ಮ ಜವಾಬ್ದಾರಿ ಎನ್ನುವುದು ವಿಶ್ವ ಪರಿಸರ ದಿನ ನಮಗೆ ನೆನಪಿಸುತ್ತದೆ. ಇವತ್ತು ನಾವು ಗಿಡ ನೆಟ್ಟರೆ ನಾಳೆ ನಮ್ಮ ಭವಿಷ್ಯ ಹಸಿರಾಗಿರುತ್ತದೆ ಮತ್ತು ಉಜ್ವಲವಾಗಿರುತ್ತದೆ ಎಂದು ತಿಳಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಎಂ.ಎಸ್.ಮರಿಸ್ವಾಮಿಗೌಡ, ವಿಭಾಗದ ಮುಖ್ಯಸ್ಥರಾದ ಡಾ.ಎಂ.ಸಿ.ಸತೀಶ್‌ಬಾಬು, ಆರ್.ಪ್ರವೀಣ್, ಎಂ.ಎನ್.ರಮೇಶ್, ಡಿ.ಕಲ್ಯಾಣಿ ಮತ್ತು ಎಲ್.ಪ್ರಭಾವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net