ಆಟೋ ವ್ಹೀಲಿಂಗ್ ಮಾಡಿ ಪುಂಡಾಟಿಕೆ

21 HANUR 3
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಾಳುಬೆಟ್ಟ ಮಾರ್ಗದಲ್ಲಿ ಆಟೋವನ್ನು ವ್ಹೀಲಿಂಗ್ ಮಾಡುವುದರ ಮೂಲಕ ಚಾಲಕನೊಬ್ಬ ಪುಂಡಾಟಿಕೆ ಮೆರೆದಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ಮ.ಬೆಟ್ಟಕ್ಕೆ ಆಗಮಿಸುವ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಇದರಲ್ಲಿ ಬೆಂಗಳೂರು, ಮೈಸೂರು, ಮಂಡ್ಯ ಇತರ ದೂರದ ಊರುಗಳಿಂದ ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಲು ಆಟೋಗಳಲ್ಲೂ ಆಗಮಿಸುತ್ತಿದ್ದಾರೆ. ತಾಳುಬೆಟ್ಟ-ಮ.ಬೆಟ್ಟ ಮಾರ್ಗವು ಅರಣ್ಯ ಪ್ರದೇಶದ ಮೂಲಕ ಹಾದು ಹೋಗಿದ್ದು, ಕಿರಿದಾಗಿದೆ. ವಾಹನಗಳ ಸಂಚಾರ ಹೆಚ್ಚಿರುವುದರಿಂದ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇದೆ. ಹಾಗಾಗಿ ಚಾಲಕರು ಈ ಮಾರ್ಗದಲ್ಲಿ ಜಾಗರೂಕತೆಯಿಂದ ಚಾಲನೆ ಮಾಡಬೇಕಿದೆ.

ಈ ಮಧ್ಯೆ ಚಾಲಕನೊಬ್ಬ ತಾಳುಬೆಟ್ಟದ ಮೇಲೆ ಆಟೋವನ್ನು ವ್ಹೀಲಿಂಗ್ ಮಾಡಿದ್ದು, ಈ ದೃಶ್ಯವನ್ನು ಹಿಂಬದಿಯಲ್ಲಿ ತೆರಳುತ್ತಿದ್ದ ಬೈಕ್ ಸವಾರನೊಬ್ಬ ಸೆರೆ ಹಿಡಿದು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿದೆ. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪೋಸ್ಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net