

ತುಮಕೂರು: ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸುವವರಿಗೆ 1 ಲಕ್ಷ ರೂ., ಬಹುಮಾನ ನೀಡುವುದಾಗಿ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸುರೇಶಗೌಡ ಘೋಷಿಸಿದ್ದಾರೆ ಎನ್ನಲಾದ ಆಡಿಯೋ ಸಂಚಲನ ಸೃಷ್ಟಿಸಿದೆ. ಆಡಿಯೋ ಬಾಂಬ್ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ್ರನ್ನು ಭೇಟಿ ಮಾಡಿದ ಶಾಸಕ ಸುರೇಶಗೌಡ ಪ್ರತಿಭಟನೆ ಹಿಂಪಡೆಯುವುದಾಗಿ ಹೇಳುವ ಮೂಲಕ ಸಿಎಂ ವಿರುದ್ಧ ಜಿಲ್ಲೆಯ ಎನ್ಡಿಎ ಶಾಸಕರ ಕಪು$್ಪಪಟ್ಟಿ ಹೋರಾಟ ತಣ್ಣಗಾಗಿದೆ. ಇದರೊಂದಿಗೆ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ.
ಸುರೇಶಗೌಡ ರಾಜಕೀಯಬದ್ಧ ವೈರಿ ಡಿ.ಸಿ.ಗೌರಿಶಂಕರ್ ಪಕ್ಷದ ಕಚೇರಿಯಲ್ಲಿ ಭಾನುವಾರ ಬೆಳಗ್ಗೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸ್ಫೋಟಕ ಆಡಿಯೋ ರಿಲೀಸ್ ಮಾಡಿದ್ದು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿತು. ಬಿಜೆಪಿ ಶಾಸಕ ಸುರೇಶಗೌಡ ತಮ್ಮ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ, ಡಿ.2ರ ಸಿಎಂ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದರೆ 1 ಲಕ್ಷ ರೂ,, ಹಾಗೂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರೆ 50 ಸಾವಿರ ರೂ., ಹಣ ನೀಡುವುದಾಗಿ ಘೋಷಣೆ ಮಾಡಿದ್ದು, ಆ ಮೂಲಕ ರೌಡಿಗಳು, ಗೂಂಡಾಗಳನ್ನು ಬಿಟ್ಟು ದೊಂಬಿ ಎಬ್ಬಿಸುವ ಹುನ್ನಾರ ನಡೆಸಿದ್ದಾರೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುತ್ತಿದ್ದು, ಶಾಸಕರ ವಿರುದ್ಧ ಎಫ್ಐಅರ್ ದಾಖಲಿಸಿ ತನಿಖೆ ನಡೆಸುವಂತೆ ಗೌರಿಶಂಕರ್ ಒತ್ತಾಯಿಸಿದರು.
ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರಗೌಡ, ವಿಪಕ್ಷ ಶಾಸಕರು, ಮುಖಂಡರು ಪದೇ ಪದೇ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳೇ ಆಗುತ್ತಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಜನರಲ್ಲಿ ತಪ್ಪು ಭಾವನೆ ಮೂಡುವಂತೆ ಮಾಡುತ್ತಿದ್ದಾರೆ. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ರನ್ನು ಮಂತ್ರಿ ಮಾಡುತ್ತೇವೆಂದು ಕರೆದು ಕೊಂಡು ಮಂಗ ಮಾಡಿದ್ದಾರೆ ಎಂಬ ಬಿಜೆಪಿ ಶಾಸಕ ಬಿ.ಸುರೇಶಗೌಡ ಆರೋಪ ಸುಳ್ಳು. ಇಂತಹ ಆಧಾರರಹಿತ ಹೇಳಿಕೆಗಳನ್ನು ನೀಡುವುದನ್ನು ಶಾಸಕರು ಕೂಡಲೇ ನಿಲ್ಲಿಸಬೇಕು ಎಂದು ಎಚ್ಚರಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್ ಹಾಲಪ್ಪ ಮಾತನಾಡಿ, ಅಮೃತ್ ಯೋಜನೆಗೆ ಕೇಂದ್ರದ ಬಿಜೆಪಿ ಸರ್ಕಾರ ಹಣವನ್ನೆ ಬಿಡುಗಡೆ ಮಾಡಿಲ್ಲ. ಸುರೇಶ್ಗೌಡ ಸುಮ್ಮನೇ ಅಪಪ್ರಚಾರ ಮಾಡುತ್ತಿದ್ದಾರೆ. ಸಿಎಂ ಬಂದಾಗ ಯಾವುದೇ ಅಹಿತಕರ ಘಟನೆ ನಡೆದರೆ ಸುರೇಶ್ಗೌಡ ಹಾಗೂ ವಿಪಕ್ಷ ಮುಖಂಡರೇ ನೇರಹೊಣೆ ಹೊರಬೇಕಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ಕಾಂಗ್ರೆಸ್ ಅಧ್ಯಕ್ಷರುಗಳಾದ ಪ್ರಕಾಶ್, ಬುಗಡನಹಳ್ಳಿ ನಾರಾಯಣಪ್ಪ,ಮುಖಂಡರಾದ ಷಣ್ಮುಖಪ್ಪ, ಶಿವಣ್ಣ ಮತ್ತಿತರರು ಹಾಜರಿದ್ದರು.