

ಬೆಂಗಳೂರು: ಗಿರಿನಗರದ ಆಡೆನ್ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ವಿದ್ಯೋತ್ಸವ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ವೈಜ್ಞಾನಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಅಂಶವನ್ನೊಳಗೊಂಡ ಪ್ರದರ್ಶನದಲ್ಲಿ ಇಂಗ್ಲೀಷ್ ಮತ್ತು ಕನ್ನಡದ ನಾಟಕಗಳು, ಶಾಸ್ತ್ರೀಯ ಮತ್ತು ಪಾಶ್ಚಾತ್ಯ ನೃತ್ಯ, ವಾದ್ಯ ಸಂಗೀತ, ಯೋಗಾಭ್ಯಾಸವನ್ನು ಪ್ರದರ್ಶಿಸಲಾಯಿತು.
ಈ ವೇಳೆ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೆ.ಮುರಳೀಕೃಷ್ಣ, ಆಡೆನ್ ಪಬ್ಲಿಕ್ ಶಾಲೆಯಲ್ಲಿ ಭೋದಿಸುವ ರೀತಿ ಈ ಪ್ರದರ್ಶನದಿಂದ ತಿಳಿಯುತ್ತದೆ. ವಿದ್ಯಾರ್ಥಿಗಳು ವಿದ್ಯೋತ್ಸವದಲ್ಲಿ ವಿಜ್ಞಾನ, ತಾಂತ್ರಿಕತೆ ಮತ್ತು ಸಂಸ್ಕೃತಿಯನ್ನು ಬೆರೆಸಿ ಭಾರತೀಯ ಸಂಸ್ಕೃತಿಯ ಬಗ್ಗೆ ಪ್ರದರ್ಶನ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ರಾಮಣ್ಣ ಮಾತನಾಡಿ ವಿದ್ಯೋತ್ಸವ ಕಾರ್ಯಕ್ರಮವು ಮಕ್ಕಳ ಪ್ರತಿಭೆಗೆ ಸಾಕ್ಷಿಯಾಗಿದೆ. ಪ್ರತಿ ಮಗುವಿನ ಇಚ್ಛಾಶಕ್ತಿಗೆ ಅನುಗುಣವಾಗಿ ತರಬೇತಿ ನೀಡಿ ಸತ್ಪ್ರಜೆಯಾಗಲು ಸಹಕಾರ ನೀಡುತ್ತಿದ್ದೇವೆ. ಅದಕ್ಕೆ ತಕ್ಕಂತೆ ಪೋಷಕರು ಸಹಕಾರ ನೀಡಿದ ಪರಿಣಾಮ ಇಂತಹದ್ದೊಂದು ಉತ್ತಮ ಪ್ರದರ್ಶನ ಮೂಡಿಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಮೀನಾ, ಪ್ರಾಂಶುಪಾಲೆ ಪ್ರತಿಮಾ ಶ್ರೀವತ್ಸ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು. ಆಡೆನ್ ಪಬ್ಲಿಕ್ ಶಾಲೆಯ ವಿದ್ಯೋತ್ಸವದಲ್ಲಿ ವಿದ್ಯಾರ್ಥಿಗಳು ರೂಪಿಸಿದ್ದ ರೋಬೋಟ್ ಅತಿಥಿಗಳ ಗಮನ ಸೆಳೆಯಿತು.