

ಬೆಂಗಳೂರು: ರಾಬರಿಗೆ ಒಳಗಾಗಿದ್ದೇನೆ ಎಂದು ಹೇಳಿದ್ದವನೇ ಕೊನೆಗೆ ಗಾಬರಿಗೆ ಒಳಗಾಗಿದ್ದಲ್ಲದೆ ಆರೋಪಿ ಆಗಿಯೂ ಸಿಕ್ಕಿಬಿದ್ದಿದ್ದಾನೆ. ಸುಳ್ಳು ಹೇಳಿ ನಾಟಕವಾಡಿ ಹಣ ಲಪಟಾಯಿಸಲು ಯತ್ನಿಸಿದ ಕೊನೆಗೂ ಅದರಲ್ಲಿ ವಿಫಲನಾಗಿ ಬಂಧನಕ್ಕೀಡಾಗಿದ್ದಾನೆ.
ಅಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬನಶಂಕರಿ ನಿವಾಸಿ ಅರುಣ್ ಕುಮಾರ್ (29) ಬಂಧಿತ ವ್ಯಕ್ತಿ. ಈತ ಮಾಲೀಕ ಕೊಟ್ಟಿದ್ದ ಹಣದಲ್ಲಿ ನಾಲ್ಕು ಲಕ್ಷ ರೂಪಾಯಿ ಲಪಟಾಯಿಸಿ ದರೋಡೆ ಎಂದು ಬಿಂಬಿಸಲು ಯತ್ನಿಸಿ ಸಿಕ್ಕಿಹಾಕಿಕೊಂಡಿದ್ದಾನೆ. ಬನಶಂಕರಿಯ ಅಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಒಂದು ತಿಂಗಳ ಹಿಂದಷ್ಟೇ ಈತ ಕೆಲಸಕ್ಕೆ ಸೇರಿದ್ದ.
ಸಂಸ್ಥೆಯ ಬ್ರಾಂಚ್ಗಳಿಗೆ ಹಣ ನೀಡುವ ಕೆಲಸ ಮಾಡುತ್ತಿದ್ದ ಅರುಣ್, ಇಂದು ಬ್ರ್ಯಾಂಚ್ಗಳಿಗೆ ನೀಡಬೇಕಾಗಿದ್ದ 8 ಲಕ್ಷ ರೂಪಾಯಿಯಲ್ಲಿ 4 ಲಕ್ಷ ರೂಪಾಯಿ ಮನೆಯಲ್ಲಿ ಇಟ್ಟುಕೊಂಡಿದ್ದ. ಬಳಿಕ ನಾಯಂಡಹಳ್ಳಿ ಜಂಕ್ಷನ್ ಬಳಿ ದರೋಡೆ ಆಗಿದೆ ಎಂದು ವಿಡಿಯೋ ಕಾಲ್ ಮಾಡಿ ಹೇಳಿದ್ದ. ಯಾರೋ ಕಣ್ಣಿಗೆ ಕಾರದ ಪುಡಿ ಎರಚಿ ಹಣ ದೋಚಿದ್ದಾರೆ ಎಂದಿದ್ದ.
ಈ ಬಗ್ಗೆ ದೂರು ದಾಖಲಿಸಿಕೊಂಡ ಬ್ಯಾಟರಾಯನಪುರ ಠಾಣೆ ಪೊಲೀಸರು ವಿಚಾರಣೆ ನಡೆಸಿದಾಗ ದರೋಡೆ ನಡೆದ ಕುರಿತ ಸಾಕ್ಷಿಗಳು ಸಿಕ್ಕಿರಲಿಲ್ಲ. ನಂತರ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿಂದೆ ಒಂದು ಲಕ್ಷ ರೂಪಾಯಿ ಅಡ್ವಾನ್ಸ್ ಬೇಕು ಎಂದು ಮಾಲೀಕರ ಬಳಿ ಅರುಣ್ ಕೇಳಿದ್ದ ಎಂಬುದು ಕೂಡ ವಿಚಾರಣೆ ವೇಳೆ ತಿಳಿದುಬಂದಿದೆ.
ಹಣ ಮನೆಯಲ್ಲಿ ಇಟ್ಟು, ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿ ಬೆಳಗ್ಗೆ 10.45ರಲ್ಲಿ ಬೈಕ್ ನಿಲ್ಲಿಸಿ ಮೈ ಮೇಲೆ ಖಾರದ ಪುಡಿ ಎರಚಿಸಿಕೊಂಡು ದುಷ್ಕರ್ಮಿಗಳು ಹಣ ಕಿತ್ತುಕೊಂಡು ಹೋದರು ಎಂದು ಕೂಗಾಡಿಕೊಂಡು ದಾರಿಹೋಕರನ್ನು ಸೇರಿಸಿದ್ದ. ಆ ದೃಶ್ಯವನ್ನು ಮೊಬೈಲ್ ಫೋನ್ನಲ್ಲಿ ವಿಡಿಯೋ ಮಾಡಿಸಿಕೊಂಡು ಬೆಳಗ್ಗೆ 11.48ಕ್ಕೆ ಪೊಲೀಸ್ ಕಂಟ್ರೋಲ್ ರೂಮ್ 112ಗೆ ಕರೆ ಮಾಡಿದ್ದಾನೆ.
ವಿಷಯ ತಿಳಿದ ಬ್ಯಾಟರಾಯನಪುರ ಪೊಲೀಸರು ಸ್ಥಳಕ್ಕೆ ತೆರಳಿ ಅರುಣ್‌ನನ್ನು ಠಾಣೆಗೆ ಕರೆತಂದಿದ್ದಾರೆ. ಅಷ್ಟರಲ್ಲಿ ಅಟ್ಟಿಕ್ಕ ಗೋಲ್ಡ್ ಅಧಿಕಾರಿ, ಠಾಣೆಗೆ ಬಂದು ದೂರು ದಾಖಲಿಸಿದ್ದರು.
ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಜಿ.ಕೆ. ಶಂಕರ್ ನಾಯಕ್, ಸಂತ್ರಸ್ತ ಅರುಣ್‌ನನ್ನು ಕರೆದು ಹೇಳಿಕೆ ಪಡೆಯುತ್ತಿದ್ದಾಗ ಅನುಮಾನ ವ್ಯಕ್ತವಾಗಿದೆ. ಕಾರದ ಪುಡಿ ಬಿದ್ದರೆ ಕಣ್ಣು ಕೆಂಪಗಾಗಿ ಊತ ಬರಬೇಕಿತ್ತು. ಇದ್ಯಾವುದೇ ಲಕ್ಷಣ ಇಲ್ಲದ ಕಾರಣ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಅರುಣ್ ಕಣ್ಣು ಪರೀಕ್ಷೆ ಮಾಡಿಸಿದಾಗ ಕಾರದ ಪುಡಿ ಬಿದ್ದಿಲ್ಲ ಎಂದು ವೈದ್ಯರು ಖಚಿತ ಪಡಿಸಿದ್ದಾರೆ.
ಅರುಣ್‌ನನ್ನು ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಹಣದ ಅಗತ್ಯವಿದ್ದ ಕಾರಣ ಮನೆಯಲ್ಲಿ 4 ಲಕ್ಷ ರೂ. ಇಟ್ಟಿರುವುದಾಗಿ ಹೇಳಿದ್ದು, ಹಣವನ್ನು ಜಪ್ತಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.