

ಎಂ.ಎಸ್. ಸಿದ್ದಲಿಂಗೇಶ್ವರ ಮಾಗಡಿ
ಗುಡೇಮಾರನಹಳ್ಳಿ - ಮಾಗಡಿ ರಸ್ತೆ ಬದಿ ಜಂಗಲ್ ಕಟ್ಟಿಂಗ್ ವೇಳೆ ನೂರಾರು ಮರಗಿಡಗಳ ಮಾರಣ ಹೋಮವಾಗಿದೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಾಬಸ್‌ಪೇಟೆಯಿಂದ ಮಾಗಡಿವರೆಗೂ ರಸ್ತೆ ನಿರ್ವಹಣೆ ಲೋಕೋಪಯೋಗಿ ಇಲಾಖೆ ಅಧೀನಕ್ಕೆ ಒಳಪಟ್ಟ ಕೆಆರ್‌ಡಿಸಿಎಲ್ ವತಿಯಿಂದ ನಡೆದಿದೆ. ದಾಬಸ್‌ಪೇಟೆ, ಗುಡೇಮಾರನಹಳ್ಳಿ, ಮಾಗಡಿ ರಸ್ತೆ ಕಳೆದ 5 ವರ್ಷಗಳ ಹಿಂದೆ ಅಭಿವೃದ್ಧಿ ಕಂಡಿದ್ದು, ಪ್ರತಿವರ್ಷ ರಸ್ತೆ ನಿರ್ವಹಣೆ ಮಾಡದೆ, ಈಗ 5 ವರ್ಷಗಳ ನಂತರ ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗಿದೆ.
ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ಜಂಗಲ್ ಕಟ್ಟಿಂಗ್ ಮಾಡುವ ವೇಳೆ ರಸ್ತೆಯ ಎರಡು ಬದಿಗಳಲ್ಲಿ ನೆಟ್ಟಿರುವ ನೂರಾರು ಚಿಕ್ಕ ಮರಗಳನ್ನು ಕಿತ್ತು ಹಾಕಿರುವುದಲ್ಲದೆ, ಗ್ರಾಮಗಳ ನಾಮಫಲಕ ಅರ್ಧಕ್ಕೆ ಬಾಗಿಸಿ, ಮೈಲಿಗಲ್ಲು ಹಾಗೂ ರಸ್ತೆ ತಿರುವಿನ ನಾಮಫಲಕಗಳಿಗೆ ಹಾನಿಯಾಗಿದೆ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿ. (ಕೆಆರ್‌ಡಿಸಿಎಲ್) ಸಂಸ್ಥೆ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಯ ಎರಡು ಬದಿ ಕೆಲವೆಡೆ ಗಿಂಡಗಂಟಿ ಬೆಳೆದು ರಸ್ತೆಗೆ ಬಾಗಿದ್ದು, ಅಪಘಾತಗಳಿಗೆ ಕಾರಣವಾಗಿದೆ. ಮಧುಗಿರಿ ಬಳಿ ಟೋಲ್ ನಿರ್ಮಿಸುವಂತೆ ಸರ್ಕಾರ ಆದೇಶಿಸಿದ್ದರೂ ಗುಡೇಮಾರನಹಳ್ಳಿ ಬಳಿ ಟೋಲ್ ನಿರ್ಮಿಸಿ ದಂಧೆ ನಡೆಸಲಾಗುತ್ತಿದೆ. ಟೋಲ್ ತೆರವುಗೊಳಿಸುವಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರೂ ಕೆಆರ್‌ಡಿಸಿಎಲ್ ಸಂಸ್ಥೆ ಅಕ್ರಮವಾಗಿ ಟೋಲ್ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದೆ ಎನ್ನುವುದು ಕನ್ನಡಪರ ಸಂಘಟನೆಗಳ ಆರೋಪವಾಗಿದೆ.
ಅರಣ್ಯ ಇಲಾಖೆ ಲಕ್ಷಾಂತರ ರೂ. ಖರ್ಚು ಮಾಡಿ ರಸ್ತೆ ಅಕ್ಕಪಕ್ಕ ಸಾವಿರಾರು ಸಸಿಗಳನ್ನು ನೆಟ್ಟು ಪೋಷಿಸುತ್ತಿದೆ. ಆದರೆ, ಜಂಗಲ್ ಕಟ್ ಹೆಸರಿನಲ್ಲಿ ಸುಮಾರು 6 ವರ್ಷದ ಹೊಂಗೆ, ನೇರಳೆ ಮತ್ತಿತರ ಬೆಲೆ ಬಾಳುವ ಮರಗಳನ್ನು ನಾಶ ಮಾಡಿರುವುದರಿಂದ ಸರ್ಕಾರದ ಹಣ ಪೋಳಾಗಿದೆ. ಈ ಹಣವನ್ನು ಅರಣ್ಯ ಇಲಾಖೆ ಕೆಆರ್‌ಡಿಸಿಎಲ್‌ನಿಂದ ವಸೂಲಿ ಮಾಡಬೇಕು ಎನ್ನುವುದು ಪರಿಸರವಾದಿಗಳ ಆಗ್ರಹವಾಗಿದೆ.
ಜಂಗಲ್ ಕಟ್ಟಿಂಗ್ ಬಗ್ಗೆ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಇಲಾಖೆ ಸಿಬ್ಬಂದಿಯಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ.
ಚೈತ್ರ, ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ
ಒಂದು ಸಸಿ ನೆಟ್ಟು ಪೋಷಿಸುವುದು ಎಷ್ಟು ಕಷ್ಟವಿದೆ. ಆದರೆ, ಜಂಗಲ್ ಕಟ್ಟಿಂಗ್ ವೇಳೆ ನೂರಾರು ಸಸಿಗಳನ್ನು ನಾಶ ಮಾಡಿರುವರ ವಿರುದ್ದ ಅರಣ್ಯ ಇಲಾಖೆ ಶಿಸ್ತುಕ್ರಮ ಜರುಗಿಸಬೇಕು.
ಪಿ.ಟಿ. ನಾಗರಾಜು, ತಾಪಂ ಮಾಜಿ ಉಪಾದ್ಯಕ್ಷ, ಹೆಬ್ಬಾಳ್ ಪಾಳ್ಯ