ನಿವೃತ್ತ ಗ್ರಾಮಾಧಿಕಾರಿಯ ಕೊಲೆಗೆ ಯತ್ನ

Murder (1)
Published on

ಕಾಸರಗೋಡು: ನಿವೃತ್ತ ಯೋಧರಿಗಾಗಿ ಮೀಸಲಿರಿಸಿದ ಜಾಗ ನಕಲಿ ದಾಖಲೆ ತಯಾರಿಸಿ ಕಬಳಿಸಲು ಯತ್ನಿಸಿದ ಪ್ರಕರಣವನ್ನು ಬಹಿರಂಗಪಡಿಸಿದ ನಿವೃತ್ತ ಗ್ರಾಮಾಧಿಕಾರಿಗೆ ಕಾರು ಡಿಕ್ಕಿ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಪೆರ್ಮುದೆಯಲ್ಲಿ ನಡೆದಿದೆ.

ಪೈವಳಿಕೆ ಪಂಚಾಯಿತಿ ಕಯ್ಯರು ನಿವಾಸಿ ಮಹಮ್ಮದ್ ಕುಞಿ(60) ಗಾಯಾಳು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಮ್ಮದ್‌ಕುಞಿ ಅವರ ತಲೆ, ಕಾಲುಗಳಿಗೆ ಗಾಯಗಳುಂಟಾಗಿವೆ.

ಮಂಜೇಶ್ವರ ತಾಲೂಕಿನ ಕುಡಾಲ್‌ಮೇರ್ಕಳ ಗ್ರಾಮದ ಸರ್ವೇ ನಂಬರ್ 25/1ಎ2ಬಿಯಲ್ಲಿ ಒಳಗೊಂಡ 2.2 ಎಕರೆ ಜಾಗವನ್ನು ಕುಡಾಲುಮೇರ್ಕಳ ಚೇವಾರು ನಿವಾಸಿ ಮಹಮ್ಮದ್‌ಕುಞಿ ಎಂಬುವರಿಗೆ 1982ರಲ್ಲಿ ವಿಂಗಡಿಸಿ ನೀಡಿರುವ ಬಗ್ಗೆ ನಕಲಿ ದಾಖಲೆ ತಯಾರಿಸಿರುವುದಾಗಿ ವಿಜಿಲೆನ್ಸ್ ನಿರ್ದೇಶಕರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು. ನಿವೃತ್ತ ಯೋಧರಿಗೆ ಮೀಸಲಿರಿಸಿದ ಜಾಗ ಇದಾಗಿದ್ದು, ಇಲ್ಲಿ ನಿವೃತ್ತ ಯೋಧರಿಗೆ ಜಾಗ ಮಂಜೂರಾಗಿಲ್ಲ ಎಂಬುದು ಖಚಿತವಾಗಿತ್ತು. ಆದರೆ ಈ ಜಾಗವನ್ನು ನಕಲಿ ದಾಖಲೆ ನಿರ್ಮಿಸಿ ತಮ್ಮದಾಗಿಸಿಕೊಂಡು, ಈ ಜಾಗವನ್ನು ಬೇರೆ ವ್ಯಕ್ತಿಗಳಿಗೆ ಮಾರಾಟ ಮಾಡುವುದನ್ನು ಪತ್ತೆಹಚ್ಚಲಾಗಿತ್ತು. ಈ ಬಗ್ಗೆ ನೀಡಿದ ದೂರನ್ನು ಅಧಿಕಾರಿ ವಲಯ ಕಡೆಗಣಿಸಿರುವುದಾಗಿಯೂ ದೂರಲಾಗುತ್ತಿದೆ. ಮಹಮ್ಮದ್‌ಕುಞಿ ಅವರನ್ನು ಕೊಲೆಗೆ ಯತ್ನಿಸಿದ ತಂಡದಲ್ಲಿ ಮರಳುಮಾಫಿಯಾಗೆ ಸೇರಿದ ವ್ಯಕ್ತಿಯೂ ಒಳಗೊಂಡಿದ್ದಾನೆನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net