ಬಟ್ಟೆ ಅಂಗಡಿ ಮಾಲೀಕನ ಹನಿಟ್ರಾೃಪ್‌ಗೆ ಯತ್ನ

ಬಟ್ಟೆ ಅಂಗಡಿ ಮಾಲೀಕನ ಹನಿಟ್ರಾೃಪ್‌ಗೆ ಯತ್ನ
Published on

ಪಿರಿಯಾಪಟ್ಟಣ/ಬೈಲುಕುಪ್ಪೆ: ಯುವತಿಯೊಬ್ಬಳನ್ನು ಬಳಸಿಕೊಂಡು ಬಟ್ಟೆ ಅಂಗಡಿ ಮಾಲೀಕನನ್ನು ಹನಿಟ್ರಾೃಪ್ ಬಲೆಗೆ ಕೆಡವಲು ಪ್ರಯತ್ನಿಸಿರುವ ಪ್ರಕರಣವು ತಾಲೂಕಿನ ಬೈಲುಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ನೆಲೆಸಿರುವ ರಾಜಸ್ಥಾನ ಮೂಲದ ದಿನೇಶ್‌ಕುಮಾರ್ ಹನಿಟ್ರಾೃಪ್ ಸಿಲುಕಿದವರು. ದಿನೇಶ್ ಕುಮಾರ್ ಕಂಪಲಾಪುರದಲ್ಲಿ ಪೂಜಾ ಫ್ಯಾಶನ್ಸ್ ಎಂಬ ಬಟ್ಟೆ ಅಂಗಡಿ ತೆರೆದು ತನ್ನ ಸಹೋದರನೊಂದಿಗೆ ವ್ಯಾಪಾರ ಮಾಡುತ್ತಿದ್ದಾರೆ. ಜೂ.11ರ ಬುಧವಾರ ಸಂಜೆ 7.30 ರಲ್ಲಿ ಸುಮಾರು 23 ವರ್ಷದ ಯುವತಿ ಇವರ ಬಟ್ಟೆ ಅಂಗಡಿಗೆ ಬಂದು ಬಟ್ಟೆ ಖರೀದಿಸಿ ಹಣ ಪಾವತಿಸಿದ ಬಳಿಕ ಇನ್ನೂ ಬೇರೆ ಬೇರೆ ಡಿಸೈನ್ ಬಂದಾಗ ಖರೀದಿಸುವುದಾಗಿ ಹೇಳಿ ದಿನೇಶ್‌ಕುಮಾರ್‌ನ ಮೊಬೈಲ್ ನಂಬರ್ ಪಡೆದು ತೆರಳಿದ್ದಳು. ಅಂದೇ ರಾತ್ರಿ ದಿನೇಶ್‌ಕುಮಾರ್‌ಗೆ ವಾಟ್ಸ್‌ಆ್ಯಪ್ ಮೆಸೇಜ್ ಮಾಡಿ ಚಾಟಿಂಗ್ ಮಾಡಿದ್ದಳು. ಯುವತಿಯ ಮೆಸೇಜುಗಳಿಗೆ ದಿನೇಶ್ ಕುಮಾರ್ ಸಹ ನಿರಂತರವಾಗಿ 2-3 ದಿನ ಚಾಟಿಂಗ್ ನಡೆಸಿದ್ದು ಫೋಟೋಗಳು ವಿನಿಮಯವಾಗಿವೆ.

ಜೂ.14 ಸಂಜೆ ನಾಲ್ಕು ಗಂಟೆಯಲ್ಲಿ ಯುವತಿ ದಿನೇಶ್ ಕುಮಾರ್‌ಗೆ ವಾಟ್ಸ್‌ಆ್ಯಪ್ ಮೂಲಕ ಕರೆ ಮಾಡಿ ತಾನು ಬೈಲುಕುಪ್ಪೆ ಸಮೀಪದ ಮರಡಿಯೂರು ಗ್ರಾಮದ ತಮ್ಮ ಚಿಕ್ಕಮ್ಮನ ಮನೆಗೆ ಬಂದಿದ್ದು ಚಿಕ್ಕಮ್ಮ ಮದುವೆ ಕಾರ್ಯಕ್ಕೆ ಹೋಗಿದ್ದು ತಾನೊಬ್ಬಳೇ ಮನೆಯಲ್ಲಿ ಇರುವುದಾಗಿ ತಿಳಿಸಿ ಅಲ್ಲಿಗೆ ಬರುವಂತೆ ಆಹ್ವಾನಿಸಿದ್ದಾಳೆ. ದಿನೇಶ್‌ಕುಮಾರ್ ಯುವತಿ ಕಳಿಸಿದ ಲೋಕೇಶನ್ ಆಧರಿಸಿ ಕಾರಿನಲ್ಲಿ ಸಂಜೆ 4.30ಕ್ಕೆ ಮರಡಿಯೂರು ಗ್ರಾಮದ ಮನೆ ಬಳಿ ಬಂದರು. ಯುವತಿ ದಿನೇಶ್‌ಕುಮಾರ್‌ನನ್ನು ಮನೆಯೊಳಗೆ ಕರೆದೊಯ್ದು ತುಂಬಾ ಸಲುಗೆಯಿಂದ ವರ್ತಿಸಿದ್ದಾಳೆ. ಇವರಿಬ್ಬರು ಸರಸದಲ್ಲಿದ್ದಾಗ ಮನೆಯೊಳಕ್ಕೆ ನುಗ್ಗಿದ ಆನಂದ್, ಸುನೀಲ್, ಜಗತ್ ಎಂಬುವವರು ದಿನೇಶ್‌ಕುಮಾರ್‌ಗೆ ಥಳಿಸಿ ಯುವತಿಯೊಂದಿಗೆ ಆತನನ್ನು ಅರೆಬೆತ್ತಲೆಯಲ್ಲಿ ನಿಲ್ಲಿಸಿ ತಮ್ಮ ಮೊಬೈಲ್‌ನಲ್ಲಿ ಫೋಟೋ ಮತ್ತು ವಿಡಿಯೋ ತೆಗೆದುಕೊಂಡಿದ್ದಾರೆ. ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸಿ 50 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ.

ಆರೋಪಿಗಳು ಪೂರ್ವ ನಿಯೋಜನೆಯಂತೆ ಮಾಕನಹಳ್ಳಿ ಗ್ರಾಮದ ಮೂರ್ತಿ ಮತ್ತು ಹುಣಸೂರು ಗ್ರಾಮಾಂತರ ಠಾಣೆಯ ಕಾನ್‌ಸ್ಟೇಬಲ್ ಶಿವಣ್ಣ ಎಂಬುವವರನ್ನು ಸ್ಥಳಕ್ಕೆ ಕರೆಸಿಕೊಂಡು ಸಂಧಾನ ಮಾಡುವ ನಾಟಕವಾಡಿದ್ದಾರೆ. ಕಡೆಗೆ 10 ಲಕ್ಷ ರೂ. ನೀಡುವಂತೆ ತೀರ್ಮಾನಿಸಿ ದಿನೇಶ್‌ಕುಮಾರ್ ಮೊಬೈಲ್‌ನಿಂದ ಆತನ ತಮ್ಮ ಮಹೇಂದ್ರನಿಗೆ ಕರೆ ಮಾಡಿಸಿ 10 ಲಕ್ಷ ರೂ. ತಂದು ಪೊಲೀಸ್ ಕಾನ್‌ಸ್ಪೇಬಲ್ ಶಿವಣ್ಣಗೆ ತಲುಪಿಸುವಂತೆ ಸೂಚಿಸಿದ್ದಾರೆ. ಅದಕ್ಕೆ ಒಪ್ಪಿದ ದಿನೇಶ್ ಅದರಂತೆ ಮಾಡಿದ್ದಾರೆ.

ಆದರೆ ಸಹೋದರ ಮಹೇಂದ್ರ ಅನುಮಾನಗೊಂಡು ತನ್ನ ಸ್ನೇಹಿತನೊಂದಿಗೆ ಪಿರಿಯಾಪಟ್ಟಣ ಠಾಣೆಗೆ ತೆರಳಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಕೂಡಲೇ ಪೊಲೀಸರು ದಿನೇಶ್‌ಕುಮಾರ್ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಆರೋಪಿಗಳು ಕರೆ ಸ್ವೀಕರಿಸಿದರು. ದಿನೇಶ್ ಕುಮಾರ್‌ನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡದಿದ್ದಲ್ಲಿ ಕಾರ್ಯಾಚರಣೆ ಕೈಗೊಳ್ಳುತ್ತೇವೆಂದು ಪೊಲೀಸರು ಎಚ್ಚರಿಕೆ ನೀಡಿದರು.

ಇದರಿಂದ ಗಾಬರಿಗೊಂಡ ಆರೋಪಿಗಳು ದಿನೇಶ್‌ಕುಮಾರ್‌ನನ್ನು ಆತನ ಕಾರಿನಲ್ಲಿ ಬೈಲುಕುಪ್ಪೆ ಟಿಬೆಟಿಯನ್ ಮೊದಲನೇ ಕ್ಯಾಂಪ್‌ವರೆಗೆ ಕರೆತಂದು ರಾತ್ರಿ 11.30ರಲ್ಲಿ ರಸ್ತೆ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ದಿನೇಶ್‌ಕುಮಾರ್‌ನ ಸಹೋದರ ಮಹೇಂದ್ರ ಬೈಲುಕುಪ್ಪೆ ಗೆ ಬಂದು ಬಸ್‌ಸ್ಟಾೃಂಡ್ ಬಳಿ ನಿಂತಿದ್ದ ದಿನೇಶ್‌ಕುಮಾರ್‌ನನ್ನು ಬೈಲುಕುಪ್ಪೆ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಕಾನ್‌ಸ್ಟೇಬಲ್ ಶಿವಣ್ಣ ಅವರನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net