ಜಿಲ್ಲೆಯಲ್ಲಿ ಮದ್ಯ ಮಾರಾಟವಿಲ್ಲವೆಂದು ಬೇರೆ ಜಿಲ್ಲೆಯಿಂದ ತಂದು ಮಾರಲು ಪ್ರಯತ್ನ; ಮದ್ಯ ವಶ ಪಡಿಸಿಕೊಂಡ ಅಧಿಕಾರಿಗಳು

ಱದಗ
Published on

ಧಾರವಾಡ: ಲಾಕ್​ಡೌನ್​ ಪ್ರಯುಕ್ತ ಜಿಲ್ಲೆಯಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ಬಂದ್​ ಮಾಡಲಾಗಿದೆ. ಆ ಕಾರಣಕ್ಕೆ ಬೇರೆ ಜಿಲ್ಲೆಯಿಂದ ಮದ್ಯ ತಂದು ಧಾರವಾಡದಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದುದ್ದು ಅಬಕಾರಿ ಇಲಾಖೆಯ ದಾಳಿಯಿಂದ ಬೆಳಕಿಗೆ ಬಂದಿದೆ.

ಧಾರವಾಡ ತಾಲೂಕಿನ ಕಲ್ಲೇ ಗ್ರಾಮದ ಬಳಿ ಹಾಗೂ ಹಾರೋಬೆಳವಡಿ ಗ್ರಾಮದ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಈ ಕುರಿತು ಮಾಹಿತಿ ಸಿಕ್ಕ ನಂತರ ಅಲ್ಲಿನ ಅಬಕಾರಿ ಅಧಿಕಾರಿಗಳು ಎರಡು ಸ್ಥಳಗಳಲ್ಲಿ ಪ್ರತ್ಯೇಕ ದಾಳಿ ನಡೆಸಿದ್ದಾರೆ. ಆಟೋ ಚಾಲಕನೊಬ್ಬ ಮದ್ಯವನ್ನು ಕಳ್ಳಸಾಗಣೆ ಮಾಡುತ್ತಿದ್ದದ್ದು ಕಂಡುಬಂದಿದೆ. ಅಧಿಕಾರಿಗಳನ್ನು ಕಂಡೊಡನೆ ಆತ 10 ಲೀಟರ್​ ಮದ್ಯವನ್ನು ಆಟೋದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಬಶೀರ ಅಹ್ಮದ ಗರಗ ಪರಾರಿಯಾದ ಚಾಲಕ ಎನ್ನಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಯುವಕನೊಬ್ಬ ಬೈಕ್ ಮೇಲೆ ಮದ್ಯ ತರುತಿದ್ದ. ಆತ ಕೂಡ ಅಧಿಕಾರಿಗಳನ್ನು ಕಂಡೊಡನೆ ಪರಾರಿಯಾಗಿದ್ದಾನೆ. ಆತನ ಬೈಕ್​ ಹಾಗೂ ಅದರಲ್ಲಿದ್ದ 10 ಲೀಟರ್ ಮದ್ಯವನ್ನು ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಎರಡೂ ಪ್ರಕರಣಗಳನ್ನು ಪ್ರತ್ಯೇಕವಾಗಿ ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net