ತನಿಖೆಗೆ ಎರಡು ತಂಡ ರಚನೆ : ಆಗಂತುಕರಿಂದ ಉದ್ಯಮಿಯ ಮನೆಗೆ ನುಗ್ಗಲು ಯತ್ನ ಪ್ರಕರಣ

business man
ಮನೆಯ ಗೇಟ್ ತೆರೆಯಲು ಯತ್ನಿಸುತ್ತಿರುವ ಆಗಂತುಕರ ತಂಡ
Published on

ವಿಜಯವಾಣಿ ಸುದ್ದಿಜಾಲ ಕೋಟ
ಠಾಣಾ ವ್ಯಾಪ್ತಿಯ ಮಣೂರಿನ ಉದ್ಯಮಿಯೊಬ್ಬರ ಮನೆಗೆ ಪೊಲೀಸರು ಹಾಗೂ ಅಧಿಕಾರಿಗಳ ಸೋಗಿನಲ್ಲಿ ನುಗ್ಗಲು ಯತ್ನಿಸಿದ ಪ್ರಕರಣದ ತನಿಖೆಗೆ ಪ್ರತ್ಯೇಕ ಎರಡು ತಂಡ ರಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ತಿಳಿಸಿದ್ದಾರೆ. ಮನೆಯ ಮಾಲೀಕ ಬೆಟ್ಟಿಂಗ್ ಸಹಿತ ಇತರ ಕ್ರಿಮಿನಲ್ ಪ್ರಕರಣಗಳ ಆರೋಪಿಯಾಗಿದ್ದಾನೆ ಎಂಬ ಮಾಹಿತಿಯಿದೆ. ಅವರ ಪತ್ನಿ ಕವಿತಾ ಸುಧೀರ್ ದೂರಿನ ಆಧಾರದ ಮೇಲೆ ಎಫ್‌ಆರ್ ದಾಖಲಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಪೂರ್ವನಿಯೋಜಿತ ಕೃತ್ಯ?

ಆಗಂತುಕರ ತಂಡ ಕೃತ್ಯ ಬಳಿಕ ಸಾಸ್ತಾನ ಟೋಲ್ ಮಾರ್ಗದಲ್ಲಿ ಸಂಚರಿಸದೆ ಬಾರ್ಕೂರು ರಸ್ತೆ ಮೂಲಕ ಟೋಲ್ ತಪ್ಪಿಸಿಕೊಂಡು ಅತಿ ವೇಗವಾಗಿ ಕಾರಿನಲ್ಲಿ ತೆರಳಿದೆ. ಈ ವೇಳೆ ಕಾರಿನ ನಂಬರ್‌ಪ್ಲೇಟ್ ಗುರುತಿಸಲು ಸಾಧ್ಯವಾಗದಂತೆ ತಂಡ ಯೋಜನೆ ರೂಪಿಸಿದೆ ಎನ್ನಲಾಗಿದೆ.

ಏನಿದು ಪ್ರಕರಣ?

ಜುಲೈ 25ರಂದು ಬೆಳಗ್ಗೆ 8.30ಕ್ಕೆ ಮನೆಯ ಬಾಗಿಲು ಬಡಿದ ಶಬ್ದ ಕೇಳಿದ್ದು, ಮನೆಯೊಡತಿ ಕವಿತಾ ಪ್ರತಿಕ್ರಿಯಿಸಿರಲಿಲ್ಲ. 9 ಗಂಟೆಗೆ ಬಾಗಿಲು ತೆರೆದು ನೋಡಿದಾಗ ಯಾರೂ ಇರಲಿಲ್ಲ. ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆ ಈ ಕುರಿತು ಮನೆಯವರಿಗೆ ಕೂಡಲೇ ಮಾಹಿತಿ ನೀಡಿದ್ದು, ಸ್ವಿಫ್ಟ್ ಕಾರಿನಲ್ಲಿ ಆಗಮಿಸಿದ 6-8 ಮಂದಿ ಗೇಟ್‌ಗೆ ಗುದ್ದಿ ತೆರೆಯಲು ಯತ್ನಿಸಿದ್ದಾರೆ. ಬಳಿಕ ಇನ್ನೊಂದು ಕಡೆಯಿಂದ ಕಾಂಪೌಂಡ್‌ನಿಂದ ಜಿಗಿದು ಬಂದಿದ್ದಾರೆ. ಅಧಿಕಾರಿಗಳ ಸೋಗಿನಲ್ಲಿ ಬಂದ ಆಗಂತುಕರ ಪೈಕಿ ಒಬ್ಬಾತ ಸಫಾರಿ ಧರಿಸಿದ್ದು, ಇತರ ನಾಲ್ವರು ಪೊಲೀಸ್ ಸಮವಸ್ತ್ರದಲ್ಲಿದ್ದರು. ಒಟ್ಟು ಎಂಟು ಮಂದಿ ಕೃತ್ಯದ ಸಂದರ್ಭ ಇದ್ದರು. ಘಟನೆಯಿಂದ ಕೋಟ ಪರಿಸರದ ಜನತೆ ಆತಂಕಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net