

ಬೇಲೂರು: ಪ್ರವಾಸಿ ಕೇಂದ್ರಕ್ಕೆ ಆಗಮಿಸುವ ಪ್ರವಾಸಿಗರಿಗೆ ಅಲ್ಲಿನ ಮಾಹಿತಿ ನೀಡುವ ಪ್ರವಾಸಿ ಮಾರ್ಗದರ್ಶಿಗಳಲ್ಲಿ ಯಾರಿಗೆ ಸ್ವಂತ ಮನೆ ಇಲ್ಲವೋ ಅಂತಹವರನ್ನು ಗುರುತಿಸಿ ನಿವೇಶನ ನೀಡಲು ಮುಂದಿನ ದಿನಗಳಲ್ಲಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ಹೋಟೆಲ್ ಮಯೂರದಲ್ಲಿ ಹಾಸನ ಹಾಗೂ ಉಡುಪಿ ಜಿಲ್ಲೆಯ ಪ್ರವಾಸಿ ಮಾರ್ಗದರ್ಶಿಗಳಿಗಾಗಿ ಗುರುವಾರ ಆಯೋಜಿಸಿದ್ದ ಪುನಶ್ಚೇತನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬೇಲೂರು-ಹಳೇಬೀಡು ದೇಗುಲಗಳು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವುದು ಸಂತೋಷದ ಸಂಗತಿಯಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಹಳೇಬೀಡಿನಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣ ಮಾಡಲು ಈಗಾಗಲೇ ಜಾಗ ಗುರುತಿಸಲಾಗಿದೆ. ಮುಂದಿನ ವರ್ಷ ಬೇಲೂರು-ಹಳೇಬೀಡಿನಲ್ಲಿ ಹೊಯ್ಸಳ ಮಹೋತ್ಸವ ಆಚರಿಸಲು ಸಂಬಂಧಿಸಿದ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿದ್ದೇನೆ. ಪ್ರವಾಸಿ ಮಾರ್ಗದರ್ಶಿಗಳಿಗೆ ಗೌರವಧನ ಹೆಚ್ಚಿಸುವಂತೆ ಸಧನದಲ್ಲಿ ಒತ್ತಾಯಿಸುತ್ತೇನೆ. ಜತೆಗೆ ಬೇಲೂರು ದೇವಾಲಯದ ಆವರಣದಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿಗೆ ದೇವಾಲಯ ಆಡಳಿತದಿಂದಲೇ ಟೆಂಡರ್ ಕರೆಯಲಾಗುವುದು. ಈ ವಿಚಾರವಾಗಿ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿದ್ದೇನೆ ಎಂದರು.
ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ, ಎಚ್.ಕೆ.ಸುರೇಶ್ ಅವರು ಶಾಸಕರಾಗಿದ್ದಾಗಲೇ ಬೇಲೂರು-ಹಳೇಬೀಡು ದೇಗುಲಗಳು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವುದು ಅವರ ಅದೃಷ್ಟವಾಗಿದೆ. ಪ್ರವಾಸಿ ಮಾರ್ಗದರ್ಶಿಗಳಿಗೆ ಗೌರವಧನ ಹೆಚ್ಚಿಸಲು ಪ್ರಯತ್ನಿಸಬೇಕು, ಬೇಲೂರಿನಲ್ಲಿ ಹೊಯ್ಸಳ ಮಹೋತ್ಸವ ನಡೆಸಿ ಅದು ಜನೋತ್ಸವವಾಗಿ ಬದಲಾವಣೆಯಾಗಬೇಕು, ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಕೆಲಸವಾದರೂ 24 ಗಂಟೆಯಲ್ಲೇ ಮಾಡಿಸುತ್ತೇನೆ ಎಂದರು.
ಪ್ರವಾಸಿ ಮಾರ್ಗದರ್ಶಿಗಳ ತರಬೇತುದಾರ ಕೃಷ್ಣ, ಪ್ರವಾಸೋದ್ಯಮ ಇಲಾಖೆಯ ಇಂಜಿನಿಯರ್ ಮನು, ಸಿಬ್ಬಂದಿ ನಾಗರಾಜ್ ಮತ್ತಿತರರಿದ್ದರು.