ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ

30HNL2
Published on

ಹಾನಗಲ್ಲ: ತಾಲೂಕಿನ ಹುಲಗಿನಕೊಪ್ಪ ಗ್ರಾಮದಲ್ಲಿ ಮಹಿಳೆಯರ ನೇತೃತ್ವದಲ್ಲಿ ನಡೆಯುತ್ತಿದ್ದ ಕಳ್ಳಬಟ್ಟಿ ಸಾರಾಯಿ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು, ಹತ್ತು ಸಾವಿರ ರೂ. ಗೂ ಅಧಿಕ ಮೌಲ್ಯದ ರಸಾಯನ ನಾಶಪಡಿಸಿದ್ದಾರೆ.

ಗುರುವಾರ ಬೆಳ್ಳಂಬೆಳಗ್ಗೆ ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಸಹಯೋಗದೊಂದಿಗೆ ದಾಳಿ ನಡೆಸಿದರು. ಬ್ಯಾರೆಲ್​ಗಳಲ್ಲಿ ತಯಾರಿಸಿಟ್ಟಿದ್ದ 8 ಲೀ. ಕಳ್ಳಭಟ್ಟಿ ಸಾರಾಯಿ, 240 ಲೀಟರ್ ಕಳ್ಳಭಟ್ಟಿ ಸಾರಾಯಿ ಕೊಳೆ ನಾಶಪಡಿಸಿದರು.

ಹುಲಗಿನಕೊಪ್ಪ ಗ್ರಾಮದಲ್ಲಿ ಪುರುಷರ ಸಹಾಯದೊಂದಿಗೆ ಮಹಿಳೆಯರೇ ಕಳ್ಳಬಟ್ಟಿ ರಸಾಯನ ತಯಾರಿಸಿ ಮಾರಾಟ ಮಾಡುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಮಹಿಳೆಯರು ಪರಾರಿಯಾಗಿದ್ದಾರೆ. ಒಬ್ಬನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ಅಬಕಾರಿ ಡಿಸಿ ಡಾ. ಆಶಾಲತಾ ತಿಳಿಸಿದ್ದಾರೆ.

ಅಬಕಾರಿ ಇಲಾಖೆ ಜಿಲ್ಲಾಧಿಕಾರಿ ಡಾ.ಆಶಾಲತಾ, ಹಾನಗಲ್ಲ ಪಿಎಸ್​ಐ ಶ್ರೀಶೈಲ ಪಟ್ಟಣಶೆಟ್ಟಿ, ಆಡೂರು ಪಿಎಸ್​ಐ ಆಂಜನೇಯ, ಅಬಕಾರಿ ಇನ್ಸಪೆಕ್ಟರ್​ಗಳಾದ ಹೊನ್ನಪ್ಪ ಓಲೇಕಾರ, ಆರ್.ಎನ್. ಹೂಗಾರ, ಮಹೇಶಗೌಡ ಪಾಟೀಲ, ಹಾಗೂ ಪೊಲೀಸ್ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net