

ಮಾಗಡಿ: ಹೆಜ್ಜೇನು ದಾಳಿಯಿಂದ 10 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾಗಡಿ ತಾಲೂಕಿನ ತಗ್ಗೀಕುಪ್ಪೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಗ್ರಾಮದ ನಾಗರಾಜು ಎಂಬುವರು ತಮ್ಮ ಜಮೀನಿನ ಬಳಿ ಮುನಿಯಪ್ಪ ದೇವರ ಕಾರ್ಯಕ್ರಮ ನಡೆಸುವ ವೇಳೆ ಸಮೀಪದ ಆಲದ ಮರದಲ್ಲಿದ್ದ ಹೆಜ್ಜೇನು ದಾಳಿ ನಡೆಸಿವೆ. ಇದರ ಪರಿಣಾಮ ದೇವರ ಕಾರ್ಯದಲ್ಲಿ ಭಾಗವಹಿಸಿದ ನಾಗರಾಜು, ರತ್ನಮ್ಮ, ಸೀನಪ್ಪ, ಪಾರ್ವತಮ್ಮ, ಶ್ರೀಧರ ಸೇರಿದಂತೆ 10ಕ್ಕೂ ಹೆಚ್ಚು ಮಂದಿಗೆ ಗಾಯಗೊಳಿಸಿದೆ. ಗಾಯಾಳುಗಳನ್ನು ತಗ್ಗಿಕುಪ್ಪೆ ಅರೋಗ್ಯ ಪ್ರಾಥಮಿಕ ಕೇಂದ್ರ ಮತ್ತು ಪಟ್ಟಣದ ಸಾರ್ವಜನಿಕ ಅಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಚಿಕಿತ್ಸೆಗಾಗಿ ಗಾಯಾಳುಗಳ ಪರದಾಟ.. ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಹೆಚ್ಚು ಗಾಯಾಳುಗಳು, ರೋಗಿಗಳು ಚಿಕಿತ್ಸೆ ಪಡೆಯಲು ಬಂದರೆ ತರಬೇತಿ ಪಡೆದ ವೈದ್ಯರು ಗಾಯಾಳುಗಳಿಗೆ ಚಿಕಿತ್ಸೆ ನೀಡುವಲ್ಲಿ ವಿಳಂಬ ಮಾಡುತ್ತಿರುವುದರಿಂದ ಅಪಘಾತ ಇತರೆ ಸಮಸ್ಯೆಗಳಿಂದ ಗಾಯಗೊಂಡವರು ನರಕಯಾತನೆ ಅನುಭವಿಸುವಂಥಹ ಸ್ಥಿತಿ ನಿರ್ಮಾಣ ವಾಗಿದೆ.