ಸಂಗೀತದಿಂದ ಆತ್ಮದರ್ಶನ ಸಾಧನೆ ಸಾಧ್ಯ; ಓಂಕಾರಾಶ್ರಮ ಶ್ರೀಗಳ ಅಭಿಮತ

anugraha
Published on

ಬೆಂಗಳೂರು: ಸಂಗೀತ ಕೇವಲ ಮನೋರಂಜನೆಗಾಗಿ ಮಾತ್ರವಲ್ಲ; ಇದೊಂದು ಸಾಧನೆ, ತಪಸ್ಸು. ಮನುಷ್ಯನ ಸ್ವಸ್ವರೂಪವನ್ನು ಅರ್ಥೈಸಿ ಆತ್ಮದರ್ಶನ ಮಾಡಿಸುವ ಮಾರ್ಗ ಎಂದು ಓಂಕಾರಾಶ್ರಮದ ಶ್ರೀ ಮಧುಸೂದನಾನಂದ ಪುರಿ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ.

ಬಸವನಗುಡಿಯ ಪುತ್ತಿಗೆ ಮಠದಲ್ಲಿ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ 25ನೇ ವಾರ್ಷಿಕೋತ್ಸವದ ಬೆಳ್ಳಿಹಬ್ಬದ ಅಂಗವಾಗಿ ಆಯೋಜಿಸಿದ್ದ ಶ್ರೀಪುರಂದರ ದಾಸರು ಮತ್ತು ಶ್ರೀತ್ಯಾಗರಾಜರ ಆರಾಧನ ಮಹೋತ್ಸವದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

ಸಂಗೀತವನ್ನು ಬಹುತೇಕರು ಕೇವಲ ಮನೋರಂಜನೆಗಾಗಿ ಎಂದು ಭಾವಿಸಿದ್ದಾರೆ. ಆದರೆ ಸಂಗೀತ ಮನೋರಂಜನೆಯ ಜೊತೆಗೆ ಮನುಷ್ಯನ ಆತ್ಮದರ್ಶನ ಮಾಡಿಸುವ ತಪಸ್ಸು. ಓಂಕಾರದಿಂದ ಆರಂಭವಾಗಿ ಸಪ್ತಸ್ವರಗಳನ್ನು ಸರಿಯಾಗಿ ತಿಳಿದು ಹೇಳುವುದರಿಂದ ಮನುಷ್ಯನ ಆಜ್ಞಾಚಕ್ರಗಳನ್ನು ಜಾಗೃತ ಮಾಡುವ ಶಕ್ತಿ ಸಂಗೀತಕ್ಕಿದೆ. ಆ ಮೂಲಕ ವ್ಯಕ್ತಿಗೆ ಆತ್ಮದರ್ಶನ ಸಾಧ್ಯ ಎಂದು ಸ್ವಾಮೀಜಿ ವಿವರಿಸಿದರು.

ಅನುಗ್ರಹ ಸಂಗೀತ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗೆ ಉತ್ತಮ ಸಂಗೀತ ಕಲಿಸುವ ಮೂಲಕ ಅತಿರಥರನ್ನು ಸಮಾಜಕ್ಕೆ ನೀಡುತ್ತಿದೆ. ಇಂದಿನ ಕಾರ್ಯಕ್ರಮದಲ್ಲಿ ಕಾಕತಾಳೀಯವೆಂಬಂತೆ 36 ವೀಣೆಗಳನ್ನು ಇಟ್ಟಿದ್ದು, 36 ಛಂದಸ್ಸಿನ ಸಂಗೀತದ ಮೂಲಕ ವಿಶ್ವಾಮಿತ್ರ ಲೋಕಪ್ರಸಿದ್ಧಿಯಾದರು ಎಂದು ಶ್ರೀಗಳು ತಿಳಿಸಿದರು.

ಸಮಾರಂಭದಲ್ಲಿ ವಿದ್ವಾನ್ ಎಚ್.ಎಸ್.ನಾಗರಾಜ್, ಡಾ.ಸೂರ್ಯ ಪ್ರಸಾದ್,ಅನುಗ್ರಹ ಸಂಗೀತ ವಿದ್ಯಾಲಯದ ಮುಖ್ಯಸ್ಥ ಜೆ.ಎಸ್.ಶ್ರೀಕಂಠ ಭಟ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಮೂಹ ಗಾಯನ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net