ಬೆಂಗಳೂರು: ಒಳಮೀಸಲಾತಿ ಜಾರಿಗೆ ಸಂಘರ್ಷದ ಅವಶ್ಯಕತೆಯಿಲ್ಲ; ಸಮನ್ವಯ ಬೇಕಾಗಿದೆ ಎಂದು ಒಳಮೀಸಲಾತಿ ವಿಚಾರ ಆಯೋಗದ ಅಧ್ಯಕ್ಷ ನ್ಯಾ. ನಾಗಮೋಹನ ದಾಸ್ ಅಭಿಪ್ರಾಯಿಸಿದ್ದಾರೆ.
ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಏರ್ಪಡಿಸಿದ್ದ ಮಾದಿಗ ಮತ್ತು ಸಂಬಂಧಿತ ಜಾತಿಗಳ ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ವಿವಿಧ ಸಮುದಾಯಗಳ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು.
ಜಾತಿ ಅಸಮಾನತೆ ಹೋಗುವವರೆಗೆ ಮೀಸಲಾತಿ ವ್ಯವಸ್ಥೆ ಅಗತ್ಯವಾಗಿದೆ. ಮೀಸಲಾತಿ ವ್ಯವಸ್ಥೆ ಇರುವವರೆಗೆ ಒಳಮೀಸಲಾತಿ ಕೂಡಾ ಇರಬೇಕು. ಹಾಗೆಂದ ಮಾತ್ರಕ್ಕೆ ಮೀಸಲಾತಿಯೊಂದೆ ತಳ ಸಮುದಾಯಗಳ ಎಲ್ಲ ಸಮಸ್ಯೆಗೆ ಪರಿಹಾರವಲ್ಲ. ಸೃಷ್ಟಿಯಾಗುವ 100 ಉದ್ಯೋಗದಲ್ಲಿ 98 ಖಾಸಗಿ ವಲಯದ ಉದ್ಯೋಗಗಳು. 2 ಮಾತ್ರ ಸರ್ಕಾರಿ ಉದ್ಯೋಗ. ಖಾಸಗಿ ವಲಯದಲ್ಲಿ ಮೀಸಲಾತಿ ಇಲ್ಲ. ಕೇವಲ 2 ಉದ್ಯೋಗದಲ್ಲಿ ಸಾಮಾನ್ಯ ವರ್ಗ, ಇತರೆ ಹಲವು ವರ್ಗಗಳ ಮೀಸಲಾತಿಯ ಭಾಗಗಗಳನ್ನು ಹಂಚಿಕೆ ಮಾಡಿ ಉಳಿದಿದ್ದರಲ್ಲಿ ಸ್ಪರ್ಧೆ ಮಾಡುವುದರಿಂದ ಪ.ಜಾ. ಮತ್ತು ಪ.ಪಂ. ಎಲ್ಲ ವಿದ್ಯಾವಂತ ಯುವಕ–ಯುವತಿಯರ ಬದುಕನ್ನು ನಿರ್ಮಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಕೇವಲ ಮೀಸಲಾತಿ, ಒಳಮೀಸಲಾತಿಗಾಗಿ ಹೋರಾಟ ಮಾಡುವವರು ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಜಾರಿಯಾಗಿರುವ ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡದೆ ಕೂತಿದ್ದಾರೆ. ಆ ಬಗ್ಗೆ ಹಾಗೂ ಖಾಸಗಿ ವಲಯದಲ್ಲಿ ಅವಕಾಶ ಗಿಟ್ಟಿಸಲು ಬೇಕಾದ ಕೌಶಲ, ಗುಣಮಟ್ಟದ ವಿದ್ಯೆಯನ್ನು ಪಡೆದುಕೊಳ್ಳುವ ಬಗ್ಗೆಯೂ ಚರ್ಚೆ ನಡೆಸಬೇಕು ಎಂದು ನಾಗಮೋಹನ್ ದಾಸ್ ಸಲಹೆ ನೀಡಿದರು.
ಈ ಹಿಂದೆ 2020 ರಲ್ಲಿ ಮೀಸಲಾತಿ ಹೆಚ್ಚಿಸುವ ಕುರಿತು ಇರುವ ಅವಕಾಶ ಮತ್ತು ಅಗತ್ಯದ ಬಗ್ಗೆ ವರದಿ ನೀಡುವಂತೆ ಸರ್ಕಾರ ಆಯೋಗ ರಚನೆ ಮಾಡಿತ್ತು. 2020ರ ಜು.2 ರಂದು ಸರ್ಕಾರಕ್ಕೆ ವಿಸ್ತೃತ ವರದಿ ನೀಡಿದ್ದೆ. ನನ್ನ ಪರಿಧಿಗೆ ಸಂಬಂಧಪಡದಿದ್ದರೂ ಅಂದಿನ ವರದಿಯಲ್ಲಿ ಒಳಮೀಸಲಾತಿಯ ಅಗತ್ಯದ ಕುರಿತು ಶಿಾರಸು ಮಾಡಿದ್ದೆ. ಮುಂದೆ ಈ ದೇಶದ ಸರ್ವೋಚ್ಛ ನ್ಯಾಯಾಲಯ ಒಳಮೀಸಲಾತಿ ಜಾರಿಯ ಅವಶ್ಯಕತೆ ಮತ್ತು ಅಗತ್ಯವನ್ನು ಕುರಿತು ತೀರ್ಪು ಪ್ರಕಟಿಸಿದ ನಂತರ ಪ್ರಸ್ತುತ ಸರ್ಕಾರ ನನ್ನ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚನೆ ಮಾಡಿದ್ದು, ಸಾವಿರಾರು ಮನವಿಗಳು ಬಂದಿವೆ. ಹಲವಾರು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚೆ ನಡೆದಿದೆ. ಅವರೆಲ್ಲರೂ ನೀಡಿರುವ ಸಲಹೆಗಳನ್ನು ಮುಂದಿಟ್ಟುಕೊಂಡು ಯಾರಿಗೂ ಅನ್ಯಾಯವಾಗದಂತೆ ಈ ವರೆಗೆ ವಂಚನೆಗೊಳಗಾದವರಿಗೆ ಹೆಚ್ಚು ನ್ಯಾಯ ದೊರಕಿಸಿಕೊಡುವ ಹಾಗೆ ವರದಿ ಸಲ್ಲಿಸಲಾಗುವುದು ಎಂದು ನಾಗಮೋಹನ ದಾಸ್ ತಿಳಿಸಿದರು.
ಸಭೆಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ನಿವೃತ್ತ ಅಧಿಕಾರಿಗಳಾದ ಗೋನಾಳ್ ಭೀಮಪ್ಪ, ಬಸವರಾಜ ಮಾಲಗತ್ತಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ, ಸಮುದಾಯದ ಮುಖಂಡರುಗಳಾದ ಸಂತೋಷ ಸವಣೂರು, ಶಿವಾನಂದ, ನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.
ಮನವಿ ಪತ್ರದ ಮುಖ್ಯಾಂಶ
*ಅವಿದ್ಯಾವಂತರು, ಮೂಡನಂಬಿಕೆ, ಕುಲಕಸುಬು, ಆರ್ಥಿಕ ದುರ್ಬಲತೆ ನಡುವೆ ಮೀಸಲಾತಿಗಾಗಿ ಹೋರಾಟ ಅಸಾಧ್ಯ.
*ಮಾದಿಗರೊಂದಿಗೆ ಎಡಗೈ ಸಮುದಾಯದ ಸಮಗಾರ, ಡಕ್ಕಲಿಗ, ಮೋಚಿಗ, ಡೋಹರ ಸಮುದಾಯಗಳನ್ನು ಸೇರ್ಪಡೆಗೊಳಿಸಬೇಕು
*ಸಮುದಾಯದ ಸರ್ಕಾರಿ ಉದ್ಯೋಗಿಗಳ ಮೂಲ ಜಾತಿಯನ್ನು ನಮೂದು ಮಾಡಬೇಕು.
*ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಇತ್ಯಾದಿ ಜಾತಿ ಪ್ರಮಾಣಪತ್ರದ ಬದಲು ಮೂಲ ಜಾತಿ ಹೆಸರನ್ನು ಉಳಿಸಬೇಕು.
*ಪ.ಜಾ. ಶೈಕ್ಷಣಿಕ ಸಂಸ್ಥೆಗಳ ವಿವರವನ್ನು ಸಂಗ್ರಹಿಸಬೇಕು.
* ಅನುದಾನ, ಸಾಲ, ಗುತ್ತಿಗೆ ಇತ್ಯಾದಿ ಸೌಲಭ್ಯಗಳನ್ನು ಒಳಮೀಸಲಾತಿ ಆಧಾರದಲ್ಲಿ ಹಂಚಬೇಕು.
“ಪಕ್ಷಾತೀತವಾಗಿ ಎಲ್ಲ ನಾಯಕರು ಒಳಮೀಸಲಾತಿ ಬಗ್ಗೆ ಬೆಂಬಲ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಪ್ರಭಲವಾಗಿ ವಾದ ಮಂಡಿಸಿದ್ದರಿಂದ ಒಳಮೀಸಲಾತಿ ಪರವಾಗಿ ತೀರ್ಪು ಹೊರಬಿದ್ದಿದೆ. ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವ ಸಂಬಂಧ ಏಕಸದಸ್ಯ ಆಯೋಗ ರಚಿಸಿದೆ. ಯಾವುದೇ ಹೊಸ ವರದಿ ಬಂದಾಗ ವಿರೋಧ ಸಹಜ. ವಿರೋಧದದ ನಡುವೆ ಜಾರಿಗೊಳಿಸುವುದೇ ನಿಜವಾದ ಸಮಾಜಿಕ ನ್ಯಾಯ.”
–ಎಚ್.ಆಂಜನೇಯ, ಮಾಜಿ ಸಚಿವ
ಫೆ.16ಕ್ಕೆ ಎಲೆಕ್ಟ್ರಿಕ್ ವಾಹನಗಳ ಪ್ರದರ್ಶನ, ಶ್ರೀತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಸಾಲಮೇಳ