ಹಣ ಕದ್ದು ಅತ್ತೆ ಮಗಳ ಜತೆ ಎಸ್ಕೇಪ್​ ಪ್ರಕರಣ: ಬಂಧಿತ ಎಟಿಎಂ ವಾಹನ ಚಾಲಕನಿಂದ ಮತ್ತೊಂದು ಶಾಕ್​!

ATM
Published on

ಬೆಂಗಳೂರು: ನಗರದ ಎಟಿಎಂ ಒಂದಕ್ಕೆ ಹಣ ಹಾಕುವ ಸಂಬಂಧ ವಾಹನದಲ್ಲಿ ತಂದಿದ್ದ 65 ಲಕ್ಷ ರೂಪಾಯಿಯೊಂದಿಗೆ ನಾಪತ್ತೆಯಾಗಿದ್ದ ಅದೇ ವಾಹನದ ಚಾಲಕನೀಗ ಪೊಲೀಸರು ಅತಿಥಿಯಾಗಿದ್ದಾನೆ.

ಫೆ.3 ರಂದು ಮಂಡ್ಯ ಮೂಲದ ಯೋಗೇಶ್​ ಎಂಬಾತ ಹಣದೊಂದಿಗೆ ಪರಾರಿಯಾಗಿದ್ದ. ಸೆಕ್ಯೂರ್ ವ್ಯಾಲ್ಯೂ ಎಜೆನ್ಸಿಯಲ್ಲಿ ಡ್ರೈವರ್ ಆಗಿದ್ದ ಆರೋಪಿ, ಗನ್​ಮ್ಯಾನ್ ಮತ್ತು ಮ್ಯಾನೇಜರ್ ಎಟಿಎಂಗೆ ದುಡ್ಡು ಹಾಕಲು ಒಳಗೆ ಹೋಗಿದ್ದಾಗ ಹೊರಗಡೆ ಇದ್ದ 65 ಲಕ್ಷ ರೂಪಾಯಿಗಳನ್ನು ಎತ್ತುಕೊಂಡು ಹೋಗಿದ್ದ.

ಇದಾದ ಬಳಿಕ ಆರೋಪಿ ಪತ್ತೆಗೆ ಸುಬ್ರಮಣ್ಯ ನಗರ ಪೊಲೀಸರು ತಂಡ ರಚನೆ ಮಾಡಿದ್ದರು. ಶೋಧ ಕಾರ್ಯ ನಡೆಸಿದ್ದ ಪೊಲೀಸರಿಗೆ ಕೆಲವೊಂದು ಮಾಹಿತಿಗಳು ಲಭ್ಯವಾಗಿತ್ತು. ಅದೇನೆಂದರೆ ಯೋಗೇಶ್​, ಎಟಿಎಂಗೆ ಹಾಕಬೇಕಿದ್ದ ಹಣದ ಜತೆ ತನ್ನ ಅತ್ತೆ ಮಗಳ ಜತೆ ಪರಾರಿಯಾಗಿರುವ ಮಾಹಿತಿ ತಿಳಿದುಬಂದಿತ್ತು.

ಗಂಡನನ್ನು ಬಿಟ್ಟಿದ್ದ ಅತ್ತೆ ಮಗಳ ಜತೆ ಯೋಗೇಶ್​ ಸಂಬಂಧ ಹೊಂದಿದ್ದ. ಮೊದಲೇ ಎರಡು ಮಕ್ಕಳ ತಂದೆಯಾಗಿರುವ ಯೋಗೇಶ್​, ಅತ್ತೆ ಮಗಳ ಜತೆ ಪ್ರತ್ಯೇಕ ಸಂಸಾರ ನಡೆಸಲು ಹಣವನ್ನು ಕದ್ದಿರುವುದು ಪೊಲೀಸರ ತನಿಖೆಯಿಂದ ಬಯಲುಗೊಂಡಿದೆ.

ಎಟಿಎಂಗೆ ಹಾಕಬೇಕಿದ್ದ 65 ಲಕ್ಷ ರೂಪಾಯಿಯೊಂದಿಗೆ ಆಟೋದಲ್ಲಿ ಹೋಗಿರುವುದನ್ನು ಪೊಲೀಸರು ಸಿಸಿಟಿವಿ ಸಹಾಯದಿಂದ ಪತ್ತೆಹಚ್ಚಿದ್ದರು. ಸ್ವಲ್ಪ ದೂರ ಆಟೋದಲ್ಲಿ ಹೋಗಿರುವ ಈತ ನಂತರ ತನ್ನ ಲವರ್​ ಅನ್ನು ಅದೇ ಆಟೋಗೆ ಹತ್ತಿಸಿಕೊಂಡು ಪರಾರಿಯಾಗಿದ್ದ. ಆ ಬಳಿಕ ಇಬ್ಬರ ಫೋನ್​ ಸ್ವಿಚ್ ಆಫ್ ಆಗಿತ್ತು. ಉತ್ತರ ಭಾರತದ ಕಡೆ ಪರಾರಿಯಾಗಿರವ ಬಗ್ಗೆ ತಮಗೆ ಮಾಹಿತಿ ಸಿಕ್ಕಿತ್ತು.

ಆದರೆ, ಮೈಸೂರಿನಲ್ಲಿ ಸ್ನೇಹಿತರ ಜತೆ ಸಂಪರ್ಕದಲ್ಲಿದ್ದಾಗ ಆರೋಪಿ ಬಲೆಗೆ ಬಿದ್ದಿದ್ದಾನೆ. ಯೋಗೇಶ್ ಬಂಧನ ಬಳಿಕ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು. ಕಳ್ಳತನ ಮಾಡಿದ್ದ 64 ಲಕ್ಷದಲ್ಲಿ ಆತನ ಬಳಿಯಿದ್ದದ್ದು ಕೇವಲ 15 ಸಾವಿರ ರೂ. ಮಾತ್ರ. ಉಳಿದ ಹಣ ಎಲ್ಲಿ ಅಂದರೆ ಆರೋಪಿ ಬಾಯಿ ಬಿಡುತ್ತಿಲ್ಲ. ಸದ್ಯ ಯೋಗೇಶ್​ನನ್ನು ಬಂಧಿಸಿ ಕರೆತಂದಿರುವ ಸುಬ್ರಮಣ್ಯ ನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net