

ತುಮಕೂರು: ಜಿಲ್ಲೆಯ ಅತ್ಯುತ್ತಮ ಅಥ್ಲೀಟ್ ಎನಿಸಿರುವ ಶಿವಾನಿ ಎಸ್ ರೈ ಈ ಬಾರಿಯ ದ್ವೀತಿಯ ಪಿಯು ಪರೀಕ್ಷೆ ಯಲ್ಲು ಶ್ರೇಷ್ಠ ಸಾಧನೆ ತೋರಿದ್ದಾರೆ. ವಿದ್ಯಾನಿಧಿ ಪಿಯು ಕಾಲೇಜಿನ ಶಿವಾನಿ ಓದಿನ ಜತೆಗೆ ಅಥ್ಲೆಟಿಕ್ಸ್ನಲ್ಲಿ ಉತ್ತಮ ನಿರ್ವಹಣೆ ತೋರುತ್ತಾ ಬಂದಿರುವುದು ವಿಶೇಷವೆನಿಸಿದೆ.
ಜಿಲ್ಲಾಮಟ್ಟದ 100, 200 ಮೀ., ಓಟದಲ್ಲಿ ಪ್ರಾಥಮಿಕ, ಪ್ರೌಢಶಾಲೆಯಿಂದಲು ಪ್ರಥಮ ಸ್ಥಾನ ಗೆಲ್ಲುತ್ತಾ ಬಂದಿದ್ದು ಪಿಯು ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲು ಉತ್ತಮ ನಿರ್ವಹಣೆ ತೋರಿದ್ದರು. ಪ್ರತಿನಿತ್ಯ ಓದಿಗೆ ಪ್ರಾಮುಖ್ಯತೆ ಕೊಟ್ಟಂತೆ ಒಂದೆರಡು ಗಂಟೆ ಬೆಳಗ್ಗೆ, ಸಂಜೆ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ ಅಭ್ಯಾಸದಲ್ಲಿ ತೊಡಗುತ್ತಿದ್ದ ಶಿವಾನಿಗೆ ರಾಜ್ಯತಂಡ ಪ್ರತಿನಿಧಿಸುವ ಕನಸಿದೆ.
ಓದಿನಲ್ಲು ಎಂದೂ ಶಿವಾನಿ ಹಿಂದೆಬಿದ್ದಿಲ್ಲ. ಓಟದಂತೆ ಓದಿನಲ್ಲು ಸದಾ ಮುಂದೆ. ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ದ್ವೀತಿಯ ಸ್ಥಾನ ಪಡೆದ ಶಿವಾನಿ ಪಿಸಿಎಂಬಿಯಲ್ಲಿ 398/400 ಅಂಕ ಪಡೆದಿರುವುದು ಗಮನಾರ್ಹ ಸಾಧನೆ ಎನಿಸಿದೆ. ಭೌತಶಾಸ್ತ್ರ-98, ರಸಾಯನಶಾಸ್ತ್ರ -100, ಗಣಿತ-100, ಜೀವಶಾಸ್ತ್ರ-100, ಕನ್ನಡ -98, ಇಂಗ್ಲೀಷ್-97 ಅಂಕಗಳಿಸಿದ್ದು ಒಟ್ಟಾರೆ 593 ಅಂಕಗಳಿಸಿ ಜಿಲ್ಲೆಗೆ ದ್ವೀತಿಯ ಟಾಪರ್ ಎನಿಸಿದ್ದಾರೆ.
ಕ್ರೀಡೆ ಜತೆಗೆ ಶೈಕ್ಷಣಿಕವಾಗಿಯು ಉತ್ತಮ ನಿರ್ವಹಣೆ ತೋರಬಹುದು. ಮಾನಸಿಕ, ದೈಹಿಕ ಸದೃಢತೆ ಜತೆಗೆ ಏಕಾಗ್ರತೆಗೆ ಕ್ರೀಡೆ ಸಹಕಾರಿ ಎನಿಸಿದೆ. ಈ ನಿಟ್ಟಿನಲ್ಲಿ ಶಿವಾನಿ ಸಾಧನೆ ಅದ್ವೀತಿಯ ಎನ್ನುತ್ತಾರೆ ವಿದ್ಯಾವಾಹಿನಿ ಸಮೂಹ ಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದಿಪ್ ಕುಮಾರ್.