ನಲ್ಲಿ ವಿಚಾರಕ್ಕೆ ಮೂವರ ಮೇಲೆ ಹಲ್ಲೆ

FotoJet (1)
Published on

ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು

ಚಿಂತಾಮಣಿ: ತಾಲೂಕಿನ ಬಚ್ಚಗಾನಹಳ್ಳಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಅಳವಡಿಸಿರುವ ನಲ್ಲಿ ಸಂಪರ್ಕ ಹಾಗೂ ಹಳೇ ವೈಷ್ಯಮದ ಹಿನ್ನೆಲೆಯಲ್ಲಿ ಗ್ರಾಮದ ಎರಡು ಕುಟುಂಬಗಳ ನಡುವೆ ಉಂಟಾದ ಗಲಾಟೆಯಲ್ಲಿ ಗುಂಪೊಂದು ಮೂವರ ಮೇಲೆ ಮಾರಕಾಸಗಳಿಂದ ಹಲ್ಲೆ ನಡೆಸಿದೆ.

ಗ್ರಾಮದ ಗಾಯತ್ರಿ, ಈಕೆಯ ಪತಿ ಚಲಪತಿ ಮತ್ತು ಮಾವ ಶಿವಣ್ಣ ಗಾಯಗೊಂಡವರು. ಇದೇ ಗ್ರಾಮದ ಮನೋಜ್, ಶ್ರೀನಿವಾಸ್, ಈರಪ್ಪ, ಸುಧಾಕರ್ ಮತ್ತು ರತ್ನಮ್ಮ ಎಂಬುವರ ವಿರುದ್ಧ ತಾಲೂಕಿನ ಕೆಂಚಾರ್ಲಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಖಾಲಿ ಜಾಗದ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ವೈಷಮ್ಯವಿತ್ತು. ಇದೇ ವಿಚಾರವಾಗಿ ಮನೋಜ್ ಮತ್ತು ಶ್ರೀನಿವಾಸ್ ಆಗಾಗ ಜಗಳ ಮಾಡುತ್ತಿದ್ದರು. ಈ ನಡುವೆ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಎದುರು ಹೊಸದಾಗಿ ಕೊಳಾಯಿ ಅಳವಡಿಸಿದ್ದು, ಎರಡು ದಿನಗಳಿಂದ ವಿನಾಕಾರಣ ಮನೋಜ್ ಜಗಳ ಮಾಡುತ್ತಿದ್ದ. ೆ.6ರಂದು ಸಂಜೆ ಮನೋಜ್ ಮತ್ತವರ ಗುಂಪು ಮತ್ತೆ ಜಗಳ ತೆಗೆದು ಏಕಾಏಕಿ ಮಾರಕಾಸಗಳಿಂದ ಹಲ್ಲೆಗೆ ಮುಂದಾಯಿತು. ನನ್ನನ್ನು ರಕ್ಷಿಸಲು ಬಂದ ಚಲಪತಿ ಹಾಗೂ ಶಿವಣ್ಣ ಅವರ ಮೇಲೂ ಗುಂಪು ಹಲ್ಲೆ ನಡೆಸಿದೆ ಎಂದು ಗಾಯತ್ರಿ ದೂರಿನಲ್ಲಿ ತಿಳಿಸಿದ್ದಾರೆ.

ಗಲಾಟೆ ನಂತರ ಚಿಕಿತ್ಸೆ ಪಡೆದು ವಿಚಾರವನ್ನು ಗ್ರಾಮದ ಹಿರಿಯರ ಗಮನಕ್ಕೆ ತಂದಾಗ ರಾಜೀ ಪಂಚಾಯ್ತಿ ನಡೆಸಲಾಗಿತ್ತು. ಆದರೆ, ಹಲ್ಲೆ ನಡೆಸಿದವರು ಪಂಚಾಯ್ತಿಗೆ ಬಾರದ ಕಾರಣ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net