

ಮರಿದೇವ ಹೂಗಾರ ಹುಬ್ಬಳ್ಳಿ
ಸಂಜೆಯಾಗುತ್ತಿದ್ದಂತೆ ವೈನ್ಶಾಪ್ಗಳ ಮುಂದೆ ಕೆಲ ವಿದ್ಯಾರ್ಥಿಗಳ ದಂಡು. ಮಧ್ಯ ರಾತ್ರಿಯಾದರೆ ಸಾಕು, ಹಾಸ್ಟೆಲ್ಗಳಲ್ಲಿ ಗುಂಪುಗಳಿಂದ ‘ಗುಂಡು ಪಾರ್ಟಿ’…
ಇದು ಧಾರವಾಡ ನಗರದ ಹೃದಯ ಭಾಗದಲ್ಲಿರುವ ಮೆಟ್ರಿಕ್ ನಂತರದ ಬಿಸಿಎಂ ವಸತಿ ನಿಲಯದ ಕೆಲ ವಿದ್ಯಾರ್ಥಿಗಳು ಮೈಗೂಡಿಸಿಕೊಂಡಿರುವ ದುರಾಭ್ಯಾಸ. ಈ ಕುರಿತು ಅಲ್ಲಿಯೇ ಇರುವ ಕೆಲ ವಿದ್ಯಾರ್ಥಿಗಳು ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದು, ‘ವಿಜಯವಾಣಿ’ಗೆ ಲಭ್ಯವಾಗಿದೆ. ಈ ವಿಷಯ ಈಗಾಗಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆದರೆ, ಯಾರು ಹಾಸ್ಟೆಲ್ಗಳಲ್ಲಿ ಮದ್ಯ ತಂದು ಕುಡಿಯುತ್ತಿದ್ದಾರೆಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲವೋ ಅಥವಾ ವಿದ್ಯಾರ್ಥಿಗಳ ಹಿಂದಿರುವ ಶಕ್ತಿಗೆ ಹೆದರಿದ್ದಾರೋ? ಎಂಬುದು ಹಾಸ್ಟೆಲ್ ವಿದ್ಯಾರ್ಥಿಗಳ ಗುಮಾನಿ.
ವಾರ್ಡ್ನ್ ಈ ಹಾಸ್ಟೆಲ್ಗೆ ಭೇಟಿ ನೀಡುವುದೇ ಅಪರೂಪ. ಇದನ್ನೇ ಕಳ್ಳದಾರಿ ಮಾಡಿಕೊಂಡಿರುವ ಕೆಲ ವಿದ್ಯಾರ್ಥಿಗಳು, ಮದ್ಯದಂಗಡಿ ಮಂದೆ ನಿಂತು ಖರೀದಿ ಮಾಡಿಕೊಂಡು ಮರಳಿ ಹಾಸ್ಟೆಲ್ಗೆ ಬರುತ್ತಿದ್ದಾರೆ.
ಮದ್ಯಪ್ರಿಯ ವಿದ್ಯಾರ್ಥಿಗಳು ರಾತ್ರಿಪೂರ್ತಿ ಜಾಗರಣೆ ಮಾಡುತ್ತಿದ್ದಾರೆ. ಅವರಂತೂ ಓದುವುದಿಲ್ಲ. ಓದುವ ವಿದ್ಯಾರ್ಥಿಗಳಿಗೂ ತಂಟೆ ತೆಗೆಯುವುದನ್ನು ಬಿಡುತ್ತಿಲ್ಲ. ಕೆಲ ವಿದ್ಯಾರ್ಥಿಗಳು ಓದಲು ಕುಳಿತರೆ ಅವರ ಮೇಲೆ ರೇಗುವುದು, ಹೊಡೆಯುವುದು ಮಾಡುತ್ತಿದ್ದಾರೆ. ಇದರಿಂದ ರೋಸಿ ಹೋಗಿರುವ ವಿದ್ಯಾರ್ಥಿಗಳು, ವಾರ್ಡನ್ಗೆ ದೂರು ಕೊಟ್ಟರೆ, ನಮ್ಮ ಹಾಸ್ಟೆಲ್ಗಳಲ್ಲಿ ಅಂಥ ವಿದ್ಯಾರ್ಥಿಗಳಿಲ್ಲ ಎಂಬ ಸಬೂಬು ನೀಡುತ್ತಿದ್ದಾರೆ ಎಂಬುದು ವಿದ್ಯಾರ್ಥಿಗಳ ಆರೋಪ.
ಮಿತಿ ಮೀರಿದ ಅಟಾಟೋಪ: ಮದ್ಯ ಸೇವಿಸಿದ ವಿದ್ಯಾರ್ಥಿಗಳು ರ್ಯಾಗಿಂಗ್ ಸಹ ಮಾಡುತ್ತಿದ್ದಾರೆ. ಮದ್ಯ ಕುಡಿಯಲು ಕುಳಿತಾಗ ಚಿಪ್ಸ್, ಎಗ್, ಚಿಕನ್ ತಂದುಕೊಡುವಂತೆ ಇತರ ವಿದ್ಯಾರ್ಥಿಗಳಿಗೆ ಒತ್ತಡ ಹೇರುತ್ತಿದ್ದಾರೆ. ತರದೆ ಹೋದರೆ ಅಂಥವರಿಗೆ ‘ನಿನಗೆ ಮುಂದೆ ಕಾದಿದೆ ಶಾಸ್ತಿ’ ಎಂಬ ಬೆದರಿಕೆ ಹಾಕುತ್ತಿದ್ದಾರಂತೆ. ತಮ್ಮದೇ ವಿದ್ಯಾರ್ಥಿಗಳ ಗುಂಪು ಕಟ್ಟಿಕೊಂಡು, ಹಾಸ್ಟೆಲ್ ಹೊರ ಪ್ರದೇಶದಲ್ಲಿ ಹೊಡೆಯುವುದು, ಬಡಿಯುವುದು ಮಾಡುತ್ತಿದ್ದಾರೆ ಎಂಬುದು ನೊಂದ ವಿದ್ಯಾರ್ಥಿಗಳ ಆರೋಪ.
ಮದ್ಯ ಕುಡಿದು ಹಾಸ್ಟೆಲ್ಗೆ ಬರುತ್ತಿರುವ ಅಥವಾ ಹಾಸ್ಟೆಲ್ನಲ್ಲಿ ಮದ್ಯ ಸೇವಿಸುವ ವಿದ್ಯಾರ್ಥಿಗಳು ಯಾರೆಂಬುದನ್ನು ಪತ್ತೆ ಹಚ್ಚುತ್ತೇವೆ. ಈ ಕುರಿತು ಅಲ್ಲಿನ ವಾರ್ಡನ್ಗಳಿಂದ ಮಾಹಿತಿ ಪಡೆದು ಕ್ರಮ ಜರುಗಿಸಲಾಗುವುದು. | ಎಸ್.ವಿ. ಹಳಕಟ್ಟಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ