

ಗುಡಿಬಂಡೆ: ತಾಲೂಕಿನಲ್ಲಿ ಪ್ರತಿ ತಿಂಗಳು ಕನಿಷ್ಠ 5 ಬಾಲ್ಯವಿವಾಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಎಲ್ಲರ ಸಹಕಾರದೊಂದಿಗೆ ದಲಿತ ಕಾಲನಿಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಇಂತಹ ಪಿಡುಗಿಗೆ ಕಡಿವಾಣ ಹಾಕಲಾಗುವುದು ಎಂದು ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಗ್ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ದಲಿತ ಮುಖಂಡರ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಬಹುತೇಕ ಪೋಕ್ಸೋ ಪ್ರಕರಣಗಳಲ್ಲಿ ದಲಿತ ಕಾಲನಿಗಳ 18 ವರ್ಷದೊಳಗಿನ ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ಜನ ಪ್ರತಿನಿಧಿಗಳು, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳ ಸಹಕಾರದೊಂದಿಗೆ ಜಾಗೃತಿ ಮೂಡಿಸಲಾಗುವುದು ಎಂದರು.
ದಲಿತ ಮುಖಂಡ ಕಡೇಹಳ್ಳಿ ಕದಿರಪ್ಪ ಮಾತನಾಡಿ, ಗ್ರಾಮದಲ್ಲಿ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಸುಮಾರು 26 ದಲಿತ ಕುಟುಂಬಗಳು ಮನೆಗಳನ್ನು ಕಳೆದುಕೊಂಡಿದ್ದು ಬೀದಿಪಾಲಾಗಿವೆ. ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ ಯಾವ ಅಧಿಕಾರಿಗಳು ನಿವೇಶನ ನೀಡಲು ಮುಂದಾಗುತ್ತಿಲ್ಲ, ಕೂಡಲೇ ನಿವೇಶನಗಳನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
ಇತರ ದಲಿತ ಮುಖಂಡರು ಮಾತನಾಡಿ, ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದ್ದು, ಕೂಡಲೇ ಅಕ್ರಮ ಮಾರಾಟಕ್ಕೆ ಕ್ರಮ ಕೈಗೊಳ್ಳಬೇಕು. ಪಟ್ಟಣದಲ್ಲಿರುವ ಬಾರ್‌ಗಳಲ್ಲಿ ಬೆಳಗಾಗುವ ಮುನ್ನವೇ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ರಸ್ತೆಗಳಲ್ಲಿ ಹೆಣ್ಣು ಮಕ್ಕಳು ಓಡಾಡಲು ಕಷ್ಟ ಆಗುತ್ತಿದೆ. ಇದಕ್ಕೂ ಕಡಿವಾಣ ಹಾಕಬೇಕು. ಮುಖ್ಯರಸ್ತೆಯ ಮೋರಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು, ಪಟ್ಟಣದ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಬೇಕು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ತಹಸೀಲ್ದಾರ್ ಸಿಗ್ಬತ್‌ವುಲ್ಲಾ, ಪಿಎಸ್‌ಐ ಗಣೇಶ್, ಪಪಂ ಅಧ್ಯಕ್ಷ ಎ.ವಿಕಾಸ್, ಉಪಾಧ್ಯಕ್ಷ ಗಂಗರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ, ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ
ನರೇಂದ್ರ ಹಾಗೂ ಜೀವಿಕ ರತ್ನಮ್ಮ, ದಲಿತ ಮುಖಂಡರಾದ ಜಿಲ್ಲಾ ಸಾಯಿ ಕರ್ಮಚಾರಿ ಸಮಿತಿ ಸದಸ್ಯ ನಾರಾಯಣಸ್ವಾಮಿ, ಚನ್ನರಾಯಪ್ಪ, ಪ್ರೆಸ್ ಸುಬ್ಬರಾಯಪ್ಪ, ಆದಿನಾರಾಯಣಪ್ಪ, ರಾಮಾಂಜನೇಯ, ಅಮರಾವತಿ ಇತರರು ಇದ್ದರು.
ಜೀತಮುಕ್ತರಿಗೆ ಸೌಲಭ್ಯ ಒದಗಿಸಿ
ಜೀವಿಕ ನಾರಾಯಣಸ್ವಾಮಿ ಮಾತನಾಡಿ, ಜೀತಪದ್ಧತಿಯಿಂದ ಬಿಡುಗಡೆಯಾದ ಜೀತಮುಕ್ತರಿಗೆ ಸರ್ಕಾರಿ ಯೋಜನೆಗಳಲ್ಲಿ ಆದ್ಯತೆ ನೀಡಬೇಕಿದೆ, ಉಚಿವಾಗಿ ಬಿತ್ತನೆ ಬೀಜ ಒದಗಿಸುವುದು ಸೇರಿ ಇನ್ನಿತರ ಯೋಜನೆಗಳಲ್ಲಿ ಒಂದಿಷ್ಟು ಸೌಲಭ್ಯ ಕಲ್ಪಿಸಿಕೊಡಬೇಕು. ಗ್ರಾಪಂ ಮಟ್ಟದಲ್ಲಿ ದಲಿತ ಕುಂದುಕೊರತೆ ಸಭೆ ಮಾಡಿ, ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು. ಬಾಲ್ಯ ವಿವಾಹಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.