ಗರುಡಾದ್ರಿಪುರದಲ್ಲಿ ಚರ್ಚ್ ವಿವಾದ

wEB111
Published on

ಕ್ರೈಸ್ತ ಮಿಷನರಿಗಳಿಂದ ಗ್ರಾಮದಲ್ಲಿ ಬಲವಂತದ ಮತಾಂತರಕ್ಕೆ ಯತ್ನ ಎಂದು ಆರೋಪ

ಬಾಗೇಪಲ್ಲಿ: ಕ್ರೈಸ್ತ ಸಮುದಾಯವೇ ಇಲ್ಲದ ಗರುಡಾದ್ರಿಪುರದಲ್ಲಿ ಸ್ಥಳೀಯ ಪಂಚಾಯಿತಿ ಅನುಮತಿ ಪಡೆಯದೇ ಅಕ್ರಮವಾಗಿ ಚರ್ಚ್ ಕಟ್ಟಡ ನಿರ್ಮಿಸಿ ಗ್ರಾಮದಲ್ಲಿ ಸೌಹಾರ್ದ ಕದಡುತ್ತಿರುವ ಕೈಸ್ತ ಮಿಷನರಿಗಳು ಬಲವಂತದ ಮತಾಂತರಕ್ಕೂ ಮುಂದಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಭೋವಿ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಮಿಟ್ಟೇಮರಿ ಪಂಚಾಯಿತಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ, ಗ್ರಾಪಂ ಅಧಿಕಾರಿಗಳ ಮೂಲಕ ತಹಸೀಲ್ದಾರ್ ಹಾಗೂ ಪೊಲೀಸರಿಗೆ ಮನವಿ ಸಲ್ಲಿಸಿದರು.

ಮಿಟ್ಟೇಮರಿ ಗ್ರಾಪಂನ ಗರುಡಾದ್ರಿಪುರ ಗ್ರಾಮದಲ್ಲಿ 40 ಕುಟುಂಬಗಳು ಶಾಂತಿಯುತ ಜೀವನ ನಡೆಸುತ್ತಿವೆೆ. ಸಂಕ್ರಾಂತಿ ಹಬ್ಬದಂದು ಹೈದರಾಬಾದ್ ಮೂಲದ ಕೆಲ ಕ್ರೈಸ್ತ ಮಿಷನರಿಗಳು ಗ್ರಾಮದ ಮಧ್ಯಭಾಗದಲ್ಲಿ ಚರ್ಚ್ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಸಭೆ ಆಯೋಜಿಸಿ ಮಾಂಸದ ಅಡುಗೆ ಸಿದ್ಧಪಡಿಸಿ ಗ್ರಾಮದ ಮಕ್ಕಳಿಗೆ, ಮಹಿಳೆಯರಿಗೆ ಹಂಚಿ ಬಲವಂತದ ಮತಾಂತರಕ್ಕೆ ಒತ್ತಾಯಿಸಿ ಸಂಭ್ರಮಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಮುಖಂಡ ಅಂಬರೀಷ್ ಮಾತನಾಡಿ, ಕ್ರೈಸ್ತ ಮಿಷನರಿಗಳು ಹಣದಾಸೆ ತೋರಿಸಿ ಗ್ರಾಮದ ಒಂದೆರಡು ಮನೆಯವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಮೂಲಕ ಇಡೀ ಗ್ರಾಮದ ಎಲ್ಲರನ್ನೂ ಮತಾಂತರ ಮಾಡುವ ಹುನ್ನಾರ ನಡೆಸಿದ್ದಾರೆ. ಹಿಂದು ದೇವರನ್ನು ನಂಬಬೇಡಿ. ಶಕ್ತಿಶಾಲಿ ದೇವರಾದ ಯೇಸುವನ್ನು ನಂಬದಿದ್ದರೆ ನಿಮ್ಮ ಮನೆಯಲ್ಲಿ ಸಾವು ಸಂಭವಿಸುತ್ತದೆ ಎಂದು ಹೆದರಿಸಿ ಮಹಿಳೆಯರನ್ನು ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದಾರೆ ಎಂದು ದೂರಿದರು.

ಗ್ರಾಮದಲ್ಲಿ 40 ಭೋವಿ ಕುಟುಂಬಗಳ ಸದಸ್ಯರು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದೇವೆ. ಧರ್ಮದ ಹೆಸರಿನಲ್ಲಿ ಕ್ರೈಸ್ತ ಮಿಷನರಿಗಳು ಶಾಂತಿ ಕದಡುವ ಕೆಲಸ ಮಾಡುತ್ತಿವೆ. ತಕ್ಷಣ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಮಧ್ಯಪ್ರವೇಶಿಸಿ, ಅನುಮತಿ ಇಲ್ಲದೆ ನಿರ್ಮಾಣ ಮಾಡುತ್ತಿರುವ ಚರ್ಚ್ ಕಾಮಗಾರಿಯನ್ನು ನಿಲ್ಲಿಸಿ ಕ್ರೈಸ್ತ ಮಿಷನರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮಸ್ಥ ಶಿವಕುಮಾರ್ ಮಾತನಾಡಿ, ಪಂಚಾಯಿತಿಯಿಂದ ಅನುಮತಿ ಪಡೆಯದೆ ಅಕ್ರಮವಾಗಿ ಚರ್ಚ್ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ದೂರು ಸಲ್ಲಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತಡೆಯೊಡ್ಡಬೇಕು. ಬಲವಂತದ ಮತಾಂತರಕ್ಕೆ ಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಎಂಬಿಎಲ್ ನರಸಿಂಹಯ್ಯ, ಸದಸ್ಯ ವೆಂಕಟರಾಮಪ್ಪ, ಮುಖಂಡರಾದ ಕಾಮರೆಡ್ಡಿ, ವಿಜಯಗೋಪಾಲರೆಡ್ಡಿ, ಭೋವಿ ಸಂಘದ ಜಿಲ್ಲಾಧ್ಯಕ್ಷ ಪಿ.ಡಿ.ವೆಂಕಟರಾಮ್, ತಾಲೂಕು ಅಧ್ಯಕ್ಷ ವಿನಯ್ ಕುಮಾರ್, ಗ್ರಾಮಸ್ಥರಾದ ಮುನಿರಾಜು, ಶಂಕರ, ಕೃಷ್ಣಪ್ಪ, ಮುರಳಿ, ಅಭಿಷೇಕ್, ಮೂರ್ತಿ, ನಂಜುಂಡ, ಅಂಜಲಿ, ಭವಾನಿ, ನಿರ್ಮಲಾ, ಸುಬ್ರಮಣಿ, ಶಿವಾ ಮತ್ತಿತರರು ಇದ್ದರು.

"ಗರುಡಾದ್ರಿಪುರ ಗ್ರಾಮದಲ್ಲಿ ಚರ್ಚ್ ಕಟ್ಟಡ ನಿರ್ಮಾಣಕ್ಕಾಗಿ ಇದುವರೆಗೂ ಯಾರೂ ಅರ್ಜಿ ಸಲ್ಲಿಸಿಲ್ಲ. ಪಂಚಾಯಿತಿಯಿಂದ ಅನುಮತಿ ನೀಡಿಲ್ಲ. ಸದರಿ ಚರ್ಚ್ ನಿರ್ಮಾಣದ ಸ್ಥಳ ಕಂದಾಯ ಇಲಾಖೆಗೆ ಸೇರಿದ್ದು ತಾಲೂಕು ಆಡಳಿತದಲ್ಲಿ ಜಾಗ ಮಂಜೂರು ಮಾಡಿಸಿಕೊಳ್ಳಬೇಕಾಗಿದೆ." - ವೆಂಕಟೇಶಪ್ಪ ಪಿಡಿಒ ಮಿಟ್ಟೇಮರಿ ಗ್ರಾಮ ಪಂಚಾಯತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net