

ಬೆಂಗಳೂರು: ವಿದ್ವಾನ್ ಡಾ. ಕೆ.ಜಿ. ಸುಬ್ರಾಯ ಶರ್ಮಾರವರಿಂದ ರಚಿತವಾಗಿರುವ 154ನೇ ಗ್ರಂಥ ರತ್ನ ‘ಅಷ್ಟಾವಕ್ರಗೀತಾಸಾರ’ ಗ್ರಂಥದ ಲೋಕಾರ್ಪಣೆ ಸಮಾರಂಭವನ್ನು ಆ. 24ರಂದು ಹಮ್ಮಿಕೊಳ್ಳಲಾಗಿದೆ.
ನಗರದ ಸಾಕಮ್ಮ ಗಾರ್ಡ್‌ನ್ಸ್ ನಲ್ಲಿರುವ ವೇದಾಂತ ನಿಲಯದಲ್ಲಿ ಬೆಳಗ್ಗೆ 9 ರಿಂದ 10.30ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿ.ಎ. ಸಂಜೀವ ಮೂರ್ತಿ ಗ್ರಂಥ ಬಿಡುಗಡೆ ಗೊಳಿಸಲಿದ್ದಾರೆ. ಶ್ರೀ ಹರಿ ಅವರು ಗ್ರಂಥ ಪರಿಚಯ ಮಾಡಿಕೊಡಲಿದ್ದಾರೆ.
ಶ್ರೀ ಶಂಕರ ಅಷ್ಟಾಂಗ ಯೋಗ ಟ್ರಸ್ಟ್‌ನ ಸಂಸ್ಥಾಪಕ ಎಂ.ಕೆ. ರಾಜೇಶ್ ಕುಮಾರ್, ವಿದ್ವಾಂಸ ಎಸ್. ಆರ್. ಅನಂತಮೂರ್ತಿ, ಡಾ. ಕೆ.ಜಿ. ಸುಬ್ರಾಯ ಶರ್ಮಾ ದಂಪತಿ ಉಪಸ್ಥಿತರಿರಲಿದ್ದಾರೆ.
40 ಶ್ಲೋಕಗಳ ಗ್ರಂಥ:ಸುಜಾತ ಮತ್ತು ಕಹೋಳ ಮಹರ್ಷಿಗಳ ಸುಪುತ್ರರೂ, ಅವಧೂತವರೇಣ್ಯರೂ ಆಗಿರುವ ಅಷ್ಟಾವಕ್ರ ಮಹರ್ಷಿಗಳ ಹಾಗೂ ಜ್ಞಾನಿವರೇಣ್ಯರಾದ ಜನಕ ಚಕ್ರವರ್ತಿಗಳ ಸಂವಾದ ರೂಪವಾಗಿರುವ ಅಷ್ಟಾವಕ್ರ ಗೀತೆಯ 298 ಶ್ಲೋಕಗಳಿಂದ ಆರಿಸಿದ 40 ಶ್ಲೋಕಗಳಿಗೆ ಅನ್ವಯ ತಾತ್ಪರ್ಯಗಳನ್ನು ಗ್ರಂಥವು ಒಳಗೊಂಡಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಗ್ರಂಥದ ಒಂದು ಪ್ರತಿ ಉಚಿತವಾಗಿ ದೊರೆಯಲಿದೆ.