

ಶ್ರೀರಂಗಪಟ್ಟಣ: ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗೆ ಹಲವು ಯೋಜನೆ ರೂಪಿಸಿದ್ದು, ಮುಂಬರುವ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ತಾಲೂಕಿನ ಅರಕೆರೆ ಗ್ರಾಮದಲ್ಲಿ ಸೋಮವಾರ ಸಂತೇಮಾಳದಿಂದ ವಡಿಯಾಂಡಹಳ್ಳಿ ಗ್ರಾಮ ಸಂಪರ್ಕ ಕಲ್ಪಿಸುವ 18 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ಬಹಳಷ್ಟು ಕಾಮಗಾರಿಗಳು ಅಭಿವೃದ್ಧಿಗೊಳಿಸಲು ಬಾಕಿ ಉಳಿದಿವೆ. ಕ್ಷೇತ್ರಕ್ಕೆ ಸಾಕಷ್ಟು ನೀರಿಕ್ಷಿತ ಯೋಜನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಗಮನಕ್ಕೆ ತಂದಿದ್ದು, ಅವರು ಸಹ ಸರ್ಕಾರದಿಂದ ಈಡೇರಿಸುವ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಹಂತ ಹಂತವಾಗಿ ಚಾಲನೆ ನೀಡಲಾಗುವುದು ಎಂದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಮಿತಿ ಹಾಗೂ ಸುಪ್ರೀಂ ಕೋರ್ಟ್ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಏನೇ ತೀರ್ಪು ನೀಡಿದರೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ನಮ್ಮ ರೈತರ ಪರ ನಿಲ್ಲುವುದು ನಮ್ಮೆಲ್ಲರ ಒಗ್ಗಟ್ಟಿನ ನಿಲುವಾಗಿದ್ದು, ಇನ್ಮುಂದೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಸರ್ಕಾರಕ್ಕೆ ಒತ್ತಡ ಹೇರುತ್ತೇವೆ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸ್ಪಷ್ಟಪಡಿಸಿದರು.
ಈಗಾಗಲೇ ಕನ್ನಂಬಾಡಿ ಅಣೆಕಟ್ಟೆಯಿಂದ ಸಾಕಷ್ಟು ನೀರು ತಮಿಳುನಾಡಿಗೆ ಹರಿಸಿದ್ದು, ಜಲಾಶಯದ ನೀರಿನ ಸಂಗ್ರಹ ಮಟ್ಟ ಕುಸಿದಿದೆ. ಪ್ರಸ್ತುತ ಕಾವೇರಿ ಜಲಾನಯನ ಪ್ರದೇಶದ ಜನ-ಜಾನುವಾರುಗಳು ಸೇರಿದಂತೆ ಕಾಡುಪ್ರಾಣಿ-ಪಕ್ಷಿಗಳಿಗೂ ಕುಡಿಯಲು ಸಹ ಕೆಆರ್‌ಎಸ್ ಜಲಾಶಯದಲ್ಲಿ ನೀರಿಲ್ಲದಂತೆ ಬರಗಾಲ ಸೃಷ್ಟಿಯಾಗಿದೆ. ಹೀಗಾಗಿ ರಾಜ್ಯದ ವಿರುದ್ಧ ಇನ್ನು ಏನೇ ಆದೇಶಗಳು ಬಂದರೂ ನಮ್ಮ ರೈತರ ಹಿತಾಸಕ್ತಿ ಕಾಯುವ ಜತೆಗೆ ಅವರ ಪರ ನಿಲ್ಲುವುದಾಗಿ ಮುಖಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.
ನೀರು ಬಿಡುವುದಕ್ಕೆ ಬದಲಿಯಾಗಿ ಕಾನೂನು ಹೋರಾಟಕ್ಕೆ ಇಳಿಯುವಂತೆ ಅವರಿಗೆ ಒತ್ತಾಯಿಸಿದ್ದು, ಅವರು ಸಹ ರಾಜ್ಯ ಹಾಗೂ ನಮ್ಮ ರೈತರ ಪರ ನಿಲ್ಲುವ ಭರವಸೆ ನೀಡಿದ್ದಾರೆ. ಈಗ ಬೆಳೆ ಉಳಿಸಿಕೊಳ್ಳಲು ಕಷ್ಟಕರ ಪರಿಸ್ಥಿತಿ ಉಂಟಾಗಿರುವ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿನ ಬರಗಾಲ ಹಾಗೂ ರೈತರ ಬೆಳೆ ನಷ್ಟ ಸಂಬಂಧ ಚರ್ಚಿಸಿ ರೈತರಿಗೆ ನ್ಯಾಯ ಒದಗಿಸಲು ಮುಂದಾಗಲಾಗುವುದು ಎಂದರು.
ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಶಶಾಂಕ್, ಶಿವಯ್ಯ, ಬೋರೇಗೌಡ, ಮುರಳಿ, ಭವಾನಿ ರವಿ, ಪುರುಷೋತ್ತಮ್ ಇತರರಿದ್ದರು.